ಝಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ಆಡಿಯೊ ವೈರಲ್ ಪ್ರಕರಣ: ಪ್ರಸಾರ ಮಾಡದಂತೆ ನ್ಯಾಯಾಲಯ ಆದೇಶ

ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಇತ್ತೀಚಿಗೆ ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರದ್ದು ಎನ್ನಲಾದ ಆಡಿಯೊ ವೈರಲ್ ಪ್ರಕರಣ ಸಂಬಂಧ ದೃಶ್ಯ, ಚಿತ್ರ ಹಾಗೂ ಧ್ವನಿಸುರುಳಿಗಳನ್ನು ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಿಯೂ ಹಂಚಿಕೆ, ಪ್ರಸಾರ ಮಾಡದಂತೆ ನಗರದ ಮೆಯೋಹಾಲ್ ಘಟಕದ 57ನೆ ಎಸಿಸಿ ಸೆಷನ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಝಮೀರ್ ಅಹ್ಮದ್ ಖಾನ್ ಅವರ ಪರವಾಗಿ ನ್ಯಾಯವಾದಿ ಇಸ್ಮಾಯಿಲ್ ಝಬೀವುಲ್ಲಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮೆಯೋಹಾಲ್ ಘಟಕದ 57ನೆ ಎಸಿಸಿ ಸೆಷನ್ ನ್ಯಾಯಾಲಯ, ಮುಂದಿನ ವಿಚಾರಣೆವರೆಗೆ ಈ ಮಧ್ಯಂತರ ತಡೆಯಾಜ್ಞೆ ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.
ಇತ್ತೀಚಿಗೆ ನಡೆದ ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ಝಮೀರ್ ಅಹ್ಮದ್ ಖಾನ್ ಅವರ ಹೆಸರಿನಲ್ಲಿ ಕೆಲವೊಂದು ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನಹಾನಿಕರ, ಗೌರವಕ್ಕೆ ಧಕ್ಕೆ ತರುವಂತದ್ದು. ಇದನ್ನು ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಹಾಗೂ ಎಲ್ಲಿಯೂ ರವಾನೆ ಮಾಡದಂತೆ ನ್ಯಾಯವಾದಿ ಇಸ್ಮಾಯಿಲ್ ಝಬೀವುಲ್ಲಾ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿತ್ತು.
ಇದನ್ನು ಪರಿಗಣಿಸಿದ ನ್ಯಾಯಾಲಯ, ಈ ಕುರಿತು ವಾದಿಯ ಗೌರವಕ್ಕೆ ಧಕ್ಕೆ ತರುವಂತಹ ವಿವಾದಿತ ಆಡಿಯೊ ಹಾಗೂ ದೃಶ್ಯಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ, ಎಲ್ಲಿಯೂ ಪ್ರಸಾರ ಮಾಡದಂತೆ ಮುಂದಿನ ವಿಚಾರಣೆವರೆಗೂ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.






