ವಿಶ್ವ ಮಾನಸಿಕ ಆರೋಗ್ಯ ಜಾಗೃತಿ: ಮಾಹಿತಿ ಕಾರ್ಯಾಗಾರ

ಉಡುಪಿ, ಅ.7: ಲಯನ್ಸ್ ಜಿಲ್ಲೆ 317ಇ, ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025ರ ಸರಣಿ ಕಾರ್ಯಕ್ರಮದ ಭಾಗವಾಗಿ ನರ್ಸಿಂಗ್ ವಿದ್ಯಾರ್ಥಿ ಗಳಿಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸ್ಮಾರಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಲಯನ್ಸ್ ಮಣಿಪಾಲ ಅಧ್ಯಕ್ಷ ಡಾ.ನಿಶಾಂತ್ ಭಟ್ ಉದ್ಘಾಟಿಸಿದರು. ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಸಮಾಜದಲ್ಲಿ ಶುಶ್ರೂಷಕರೇ ಪಾತ್ರವನ್ನು ತಿಳಿಸಿದರು. ಸಪ್ತಾಹದ ಸಂಯೋಜಕ ಡಾ.ಎಚ್.ಗಣೇಶ್ ಪೈ, ಐಎಂಎ ಉಡುಪಿ- ಕರಾವಳಿ, ಕಾರ್ಯದರ್ಶಿ ಡಾ.ಮಾನಸ್ ಈ.ಆರ್., ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಾಗಾರದ ಮೊದಲ ಅವಧಿಯಲ್ಲಿ ಮನೋರೋಗದ ಕುರಿತಾದ ಅಪನಂಬಿಕೆಗಳು ಎಂಬ ವಿಷಯದ ಬಗ್ಗೆ ವಿಶ್ವೇಶ್ವರ ಹೆಗಡೆ ಮಾಹಿತಿಗಳನ್ನು ನೀಡಿದರು. ಎರಡನೆಯ ಅವಧಿಯಲ್ಲಿ ಮಾನಸಿಕ ರೋಗದ ತುರ್ತು ಚಿಕಿತ್ಸೆ ಕುರಿತು ದೀಪಶ್ರೀ ಮಾಹಿತಿ ನೀಡಿದರು. ಮೂರನೆಯ ಅವಧಿಯಲ್ಲಿ ಡಾ. ಎವಿ ಬಾಳಿಗಾ ಸ್ಮಾರಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಜಿ ಮದ್ಯ ಹಾಗೂ ಮಾದಕ ವ್ಯಸನಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಸರಕಾರಿ ನರ್ಸಿಂಗ್ ಕಾಲೇ ಹಾಗೂ ಕಾರವಾರ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.







