ಹಟ್ಟಿಯಂಗಡಿ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ

ಕುಂದಾಪುರ, ಅ.7: ರಾಜಕೀಯವ ಹಿತಾಸಕ್ತಿಗಿಂತ ಊರಿನ ಅಭಿವೃದ್ಧಿ ಮುಖ್ಯ. ಸ್ಥಳೀಯ ನಾಯಕತ್ವ, ಆಡಳಿತ ವ್ಯವಸ್ಥೆ ಚೆನ್ನಾಗಿದ್ದಾಗ ಗ್ರಾಮದ ಅಭಿವೃದ್ಧಿಯಾಗುತ್ತದೆ. ಇದಕ್ಕೆ ಊರಿನವರ ಒಗ್ಗಟ್ಟು ಮುಖ್ಯ. ಪಂಚಾಯತ್ ಮೇಲೆ ಊರಿನವರಿಟ್ಟ ಪ್ರೀತಿಯಿಂದ ಉತ್ತಮ, ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದ್ದಾರೆ.
ಸೋಮವಾರ ಹಟ್ಟಿಯಂಗಡಿ ಗ್ರಾಮ ಪಂಚಾಯತಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಟ್ಟಿಯಂಗಡಿ ಶ್ರೀಸಿದ್ದಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಚ್.ಬಾಲಚಂದ್ರ ಭಟ್ ಮಾತನಾಡಿ, ಇಡೀ ಗ್ರಾಮದ ರಾಜ್ಯಾಭಾರ ನಡೆಸಲು ನಮಗೆ ಪಂಚಾಯತ್ ಅವಶ್ಯಕ. ನಮ್ಮ ಗ್ರಾಪಂ ವ್ಯವಸ್ಥೆ ಸರಿಯಿದ್ದಾಗ ಮಾತ್ರ ಬೇರೆ ಎಲ್ಲವೂ ಸರಿ ಇರುತ್ತದೆ. ಉತ್ತಮ ಕಟ್ಟಡ ನಿರ್ಮಾಣಗೊಂಡಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.
ಮಾಜಿ ಅಧ್ಯಕ್ಷ ಕೆ.ರಾಜೀವ ಶೆಟ್ಟಿ ಪ್ರಸ್ತಾವಿಸಿ, ಹಿಂದೆ ಕರ್ಕುಂಜೆ ಮಂಡಲ ಪಂಚಾಯತ್‌ನಿಂದ ಬೇರ್ಪಟ್ಟು 1994ರಲ್ಲಿ ಈಗಿರುವ ಹಳೆ ಕಟ್ಟಡ ನಿರ್ಮಾಣವಾಗಿತ್ತು. ಗ್ರಾಮಸ್ಥರಿಗೆ ಪಿಡಿಒ, ವಿಎ, ಸದಸ್ಯರು, ಗ್ರಂಥಾಲಯ ಹೀಗೆ ಎಲ್ಲ ಸೇವೆಯೂ ಒಂದೇ ಕಟ್ಟಡದಲ್ಲಿ ಆಗಬೇಕು ಎಂಬ ನಿಟ್ಟಿನಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಹಿಂದೆ ಶಾಸಕ ರಾಗಿದ್ದ ಸುಕುಮಾರ್ ಶೆಟ್ಟಿ 10 ಲಕ್ಷ ರೂ., ಉದ್ಯೋಗ ಖಾತರಿ ಯೋಜನೆಯಡಿ 28 ಲಕ್ಷ ರೂ., ತಾ.ಪಂ. 4 ಲಕ್ಷ ರೂ., ಗ್ರಾ.ಪಂ.ನ 6-7 ಲಕ್ಷ ರೂ. ಹಾಗೂ ಊರಿನ ದಾನಿಗಳ ಸಹಕಾರದೊಂದಿಗೆ ಕಟ್ಟಡ ನಿರ್ಮಾಣವಾಗಿದೆ ಎಂದರು.
ಹಟ್ಟಿಯಂಗಡಿ ಗ್ರಾಪಂ ಅಧ್ಯಕ್ಷೆ ನಾಗರತ್ನ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕಟ್ಟಡ ನಿರ್ಮಾಣವಾಗು ವಲ್ಲಿ ನೆರವಾದ ಉದ್ಯಮಿ ಕೆ.ಎಂ.ಲಕ್ಷ್ಮಣ, ಎಚ್.ಬಾಲಚಂದ್ರ ಭಟ್, ದಾನಿಗಳಾದ ಮಂಜಯ್ಯ ಶೆಟ್ಟಿ, ಸುರ್ಧೀ ಕುಮಾರ್ ಶೆಟ್ಟಿ, ಸತೀಶ್ ಆಚಾರ್ಯ, ರಾಜೀವ ಶೆಟ್ಟಿ ನಾರ್ಕಳಿ, ಗ್ರಾಪಂ ಪಿಡಿಒ ಮಂಜುನಾಥ ಕವಟೆಕಾರ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕುಮಾರ್, ಗ್ರಾಪಂ ಸದಸ್ಯರಾದ ಸಂತೋಷ ಶೆಟ್ಟಿ ತೋಟಬೈಲು, ಅಮೃತಾ ಪಿ.ಭಂಡಾರಿ, ವಿದ್ಯಾಶ್ರೀ, ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಂಗನಾಥ್ ಮೊದಲಾದವರು ಉಪಸ್ಥಿತರಿದ್ದರು. ಯೋಗೀಶ ಕಾರ್ಯಕ್ರಮ ನಿರೂಪಿಸಿದರು.







