ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ| ಸಾಮಾನ್ಯ ಜನರ ದುಡಿಮೆ ಕಂತುಗಳಲ್ಲಿ ಲೂಟಿ: ವೆಲ್ಫೇರ್ ಪಾರ್ಟಿ ಆರೋಪ

ಉಡುಪಿ, ಮೇ 24: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಾಮಾನ್ಯ ಜನರ ದುಡಿಮೆಯನ್ನು ’ಕಂತುಗಳಲ್ಲಿ ಲೂಟಿ ಮಾಡಲಾಗುತ್ತಿದೆ’. ಹತ್ತು ದಿನದಲ್ಲಿ ಐದು ರೂಪಾಯಿ ಏರಿಕೆ ಮಾಡಿರುವುದು ಕೇಂದ್ರ ಸರಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕ ಟೀಕಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಳೆದ 10 ದಿನಗಳಲ್ಲಿ ಮೂರು ಬಾರಿ ಹೆಚ್ಚಿಸಲಾಗಿದೆ. ಈ ಹಿಂದೆ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿದ್ದಾಗಲೂ ಅದರ ಆರ್ಥಿಕ ಲಾಭವನ್ನು ಕೇಂದ್ರ ಸರಕಾರ ದೇಶದ ನಾಗರಿಕರಿಗೆ ವರ್ಗಾಯಿಸದೆ ವಂಚಿಸಿದೆ ಎಂದು ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷ ಇದ್ರೀಸ್ ಹೂಡೆ ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯವೇ ಈ ಪರಿಸ್ಥಿತಿಗೆ ಕಾರಣ. ಪೆಟ್ರೋಲ್ ಬೆಲೆ ಈಗ ಮತ್ತೆ 100 ರೂ. ಗಡಿ ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿದಿನ ಬರೋಬ್ಬರಿ 1,000 ಕೋಟಿ ರೂ. ಕೇಂದ್ರ ತೆರಿಗೆ ವಿಧಿಸುತ್ತಿದ್ದರೂ ಬಿಜೆಪಿಯ ಹಸಿವು ತೀರುತ್ತಿಲ್ಲ. ಜಾಗತಿಕವಾಗಿ ತೈಲ ಬೆಲೆ ಕಡಿಮೆ ಇದ್ದಾಗ ಇವರು ಜನರಿಗೆ ರಿಯಾ ಯಿತಿ ನೀಡಲಿಲ್ಲ. ಬದಲಿಗೆ ನಿರಂತರವಾಗಿ ಸುಲಿಗೆ ಮಾಡಿದರು. ಈಗ ಬಿಕ್ಕಟ್ಟು ಎದುರಾದಾಗ ಚುನಾವಣೆಗಳಲ್ಲಿ ಮುಳುಗಿ, ಚುನಾವಣೆ ಮುಗಿದ ಮೇಲೆ ಜನರಿಗೆ ತ್ಯಾಗದ ಪಾಠ ಬೋಧಿಸುತ್ತಿದ್ದಾರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






