ದ್ಯುತಿ ಪರ್ವ ಯಕ್ಷ ಟ್ರಸ್ಟ್ ’ಒಡ್ಡೋಲಗ’ ಉದ್ಘಾಟನೆ

ಕುಂದಾಪುರ, ಮೇ 24: ದ್ಯುತಿ ಪರ್ವ ಯಕ್ಷ ಟ್ರಸ್ಟ್ ವತಿಯಿಂದ ಯಕ್ಷಗಾನ ಕಲಾವಿದರ, ಮಹಾ ಪೋಷಕರ ಗೌರವ ಹಾಗೂ ಯಕ್ಷಗಾನ ಪ್ರದರ್ಶನದ ‘ಒಡ್ಡೋಲಗ’ ಕಾರ್ಯಕ್ರಮವನ್ನು ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಚ್. ಬಾಲಚಂದ್ರ ಭಟ್ ಮಾತನಾಡಿ, ಸಂಘ ಸಂಸ್ಥೆಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಕತ್ತಲೆಯನ್ನು ದೂರಮಾಡಿ ಸಮಾಜಕ್ಕೆ ಬೆಳಕು ತೋರುವ ಕೆಲಸ ಮಾಡಬೇಕು ಎಂದು ಹೇಳಿದರು.
ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಕೊಳ್ಕೆಬೈಲ್ ಕಿಶನ್ ಹೆಗ್ಡೆ ಮಾತನಾಡಿ, ಕರಾವಳಿ ಭಾಗದ ಗಂಡುಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವುದರಲ್ಲಿ ಎಲ್ಲಾ ಮೇಳಗಳ ಯಜಮಾನರ ಕೊಡುಗೆ ಉಲ್ಲೇಖನೀಯ. ಕಲೆಯ ದೀಪ ಜ್ಯೋತಿಯನ್ನು ಬೆಳಗಿಸುವ ಬತ್ತಿ, ಎಣ್ಣೆಗಳು ನಾವಾಗಬೇಕು. ಈಚೆಗಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ದೃತಿ ಪರ್ವ ಯಕ್ಷ ಟ್ರಸ್ಟ್ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಂದ್ರ ಶೆಟ್ಟಿ, ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಗದಗಿನ ಉದ್ಯಮಿ ವಕ್ವಾಡಿ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಭಜನೆ, ಹವ್ಯಾಸಿ ಕಲಾವಿದರಿಂದ ಯಕ್ಷಗಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಯಕ್ಷಗಾನ ಕಲಾವಿದರಿಗೆ ಹಾಗೂ ಯಕ್ಷಗಾನ ಪ್ರೋತ್ಸಾಹಕರಿಗೆ ಗೌರವ ಸಲ್ಲಿಸಲಾಯಿತು. ಪತ್ರಕರ್ತ ಶ್ರೀರಾಜ್ ವಕ್ವಾಡಿ ನಿರೂಪಿಸಿದರು.






