ಮಲ್ಪೆ ಕಡಲ ತೀರದಲ್ಲಿ ಗ್ರಾಮೀಣ ಕ್ರೀಡಾ ಸ್ಪರ್ಧೆ

ಮಲ್ಪೆ, ಮೇ 24: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ವತಿಯಿಂದ ಮಲ್ಪೆ ಕಡಲ ತೀರದ ಶ್ರೀಆನಂದ ಶರಧಿಯಲ್ಲಿ ಆಯೋಜಿಸಲಾದ ಗ್ರಾಮೀಣ ಕ್ರೀಡಾ ಸ್ಪರ್ಧೆಯನ್ನು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ದೇಹ ಮನಸ್ಸು ಎರಡನ್ನೂ ಸಮತೂಕದಿಂದ ನೋಡಿಕೊಳ್ಳಬೇಕು. ಗ್ರಾಮೀಣ ಕ್ರೀಡಾಕೂಟಗಳು ದೇಹವನ್ನು ಸ್ವಸ್ಥವಾಗಿಡಲು ಸಹಕರಿಸುವುದಲ್ಲದೆ, ಮನಸ್ಸನ್ನು ಪ್ರಸನ್ನವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಡಾ.ದೇರೆಬೈಲು ಶಿವಪ್ರಸಾದ ತಂತ್ರಿ, ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾ ಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ, ಸಂದೀಪ್ ಕುಮಾರ್, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಸಾಮಾ ಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ನಗರಸಭೆ ಮಾಜಿ ಸದಸ್ಯ ಯೋಗೀಶ್ ಸಾಲ್ಯಾನ್, ದಯೇಶ್, ದಶ ಮಹಾಬಲ, ವಿಶಾಲ್ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಗೋವಿಂದರಾಜ್ ಸ್ವಾಗತಿಸಿದರು. ವೈಭವ್ ಕೊಡವೂರು ವಂದಿಸಿದರು. ವಿಜಯ ಕುಮಾರ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ನಂತರ ಸ್ವಾಮೀಜಿ ಕಡಲ ಕಿನಾರೆಯಲ್ಲಿ ಲಗೋರಿ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸುಮಾರು 500 ಮಂದಿ ಸ್ಪರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.




