ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ; ಗೊಳಿಹೊಳೆಯಲ್ಲಿ ಕೊಚ್ಚಿ ಹೋದ ರಸ್ತೆ: ಹಲವು ಮನೆಗಳಿಗೆ ಹಾನಿ

ಉಡುಪಿ, ಮೇ 24: ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರೀ ಗುಡುಗು ಸಹಿತ ಗಾಳಿಮಳೆಯಾಗಿದ್ದು, ಇದರಿಂದ ಜಿಲ್ಲೆಯ ಹಲವು ಕಡೆ ಗಳಲ್ಲಿ ಮನೆಗಳಿಗೆ ಹಾನಿಯಾಗಿವೆ. ಅದೇ ರೀತಿ ಬೈಂದೂರು- ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ಗೊಳಿಹೊಳೆಯಲ್ಲಿ ರಸ್ತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಂಪರ್ಕ ಕಡಿತಗೊಂಡಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 35.5ಮಿ.ಮೀ. ಮಳೆಯಾಗಿದ್ದು, ಕಾರ್ಕಳ-2.2ಮಿ.ಮೀ., ಕುಂದಾಪುರ- 53.8ಮಿ.ಮೀ., ಉಡುಪಿ-62.0ಮಿ.ಮೀ., ಬೈಂದೂರು-74.8ಮಿ.ಮೀ., ಬ್ರಹ್ಮಾವರ-25ಮಿ.ಮೀ., ಕಾಪು-9.6ಮಿ.ಮೀ., ಹೆಬ್ರಿ-21.2ಮಿ.ಮೀ. ಮಳೆಯಾಗಿದೆ.
ಕ್ಷಿಪ್ತ ಹೆದ್ದಾರಿ ದುರಸ್ತಿ: ಭಾರೀ ಮಳೆಯಿಂದಾಗಿ ಕೊಲ್ಲೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಗೊಳಿಹೊಳೆ ಎಂಬಲ್ಲಿ ರಸ್ತೆ ಕೊಚ್ಚಿಕೊಂಡು ಹೋಗಿ ಸಂಪರ್ಕ ಕಡಿತಗೊಂಡಿದೆ. ತ್ವರಿತ ಕ್ರಮದಿಂದ ರಸ್ತೆ ದುರಸ್ಥಿ ಮಾಡಿದ್ದು, ಪ್ರಸ್ತುತ ವಾಹನ ಸಂಚಾರ ಪುನರಾರಂಭಗೊಂಡಿದೆ ಎಂದು ವರದಿಯಾಗಿದೆ.
ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಮಾಹಿತಿ ಪಡೆದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸ್ಥಳೀಯ ಜನಪ್ರತಿನಿಧಿ ಗಳು, ಹೆದ್ದಾರಿ ಇಂಜಿನಿಯರ್ ಗಳು, ಆಡಳಿತಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅದರಂತೆ ಸಂಬಂಧ ಪಟ್ಟವರು ಕಾರ್ಯಪ್ರವೃತ್ತರಾಗಿದ್ದು ಕಾಮಗಾರಿ ಕೈಗೊಂಡು ಪ್ರಸ್ತುತ ಸಂಚಾರಕ್ಕೆ ಅಗತ್ಯ ಕ್ರಮವಹಿಸಿದ್ದಾರೆ.
ಅದೇ ರೀತಿ ಕುಂದಾಪುರ ಹಾಗೂ ತಾಲೂಕಿನಾದ್ಯಂತ ಬೆಳಗಿನ ಜಾವ ಸುರಿದ ಭಾರೀ ಗಾಳಿಮಳೆಯಿಂದಾಗಿ ಹಲವು ಮರಗಳು ಧರೆಶಾಹಿ ಯಾಗಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದ ಹಲವು ಗ್ರಾಮಗಳಲ್ಲಿ ಸಂಜೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅಲ್ಲದೇ ಮೊಬೈಲ್ ಟವರ್‌ಗಳಿಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಹಲವು ಮನೆಗಳಿಗೆ ಹಾನಿ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ರತ್ನ ಎಂಬವರ ಮನೆಯ ಹಂಚು ಸಿಮೇಂಟ್ ಹಾನಿಯಾಗಿ ಸುಮಾರು 30,000ರೂ., ಕುಂದಾಪುರ ತಾಲೂಕಿನ ಹಳನಾಡು ಗ್ರಾಮದ ಜಲಜ ಕುಲಾಲ್ತಿ ಎಂಬವರ ಮನೆ ಹತ್ತಿರದ ಮರ ಬಿದ್ದು ಚಾವಣಿ ಹಾನಿಯಾಗಿದ್ದು, ಇದರಿಂದ 10,000ರೂ., ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಮಿನಾಕ್ಷಿ ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದ್ದು, ಇದರಿಂದ ಸುಮಾರು 25,000ರೂ. ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಗಿರಿಜ ಕುಲಾಲ್ತಿ ಎಂಬವರ ಮನೆಗೆ ಸಿಡಿಲು ಬಡಿದು ಚಾವಣಿ, ಗೋಡೆ ಹಾನಿಯಾಗಿ, ಸುಮಾರು 10,000ರೂ. ನಷ್ಟ ಉಂಟಾಗಿದೆ. ಅಲೆವೂರು ಗ್ರಾಮದ ಚನಮ್ಮ ಎಂಬವರ ಮನೆ ಮೇಲೆ ಮಣ್ಣು ಜರಿದು ಬಿದ್ದು ಭಾಗಶಃ ಹಾನಿಯಾಗಿ ಸುಮಾರು 20,000ರೂ. ನಷ್ಟವಾಗಿದೆ. ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಸದಾಶಿವ ಶೆಟ್ಟಿ ಎಂಬವರ ಅಡಿಕೆ ಮರ ದನದ ಕೊಟ್ಟಿಗೆ ಮೇಲೆ ಬಿದ್ದು ಸುಮಾರು 10,000ರೂ. ನಷ್ಟ ಉಂಟಾಗಿದೆ.
ಅದೇ ರೀತಿ ಉಡುಪಿ ನಗರದ ಕಿನ್ನಿಮುಲ್ಕಿ ರಾಮಚಂದ್ರ ಲೇನ್ ಬಳಿ ಮರವೊಂದು ಮನೆಯ ಮೇಲೆ ಬಿದ್ದು ಹಾನಿಯಾಗಿದೆ. ಅದೇ ರೀತಿ ಅಲ್ಲೇ ಸಮೀಪ ಇದ್ದ ವಿದ್ಯುತ್ ಕಂಬ ಕೂಡ ತುಂಡಾಗಿದೆ ಎಂದು ತಿಳಿದುಬಂದಿದೆ. ತೋನ್ಸೆ ಗ್ರಾಮದ ಹೂಡೆಯಲ್ಲಿ ಗಾಳಿಮಳೆಗೆ ಮರ ಬಿದ್ದು ಮನೆಗೆ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ.






