ಮಕ್ಕಳಿಗೆ ಸಂಸ್ಕಾರ ಕಲಿಸುವುದರಿಂದ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣ: ಡಾ.ನಾಗಲಕ್ಷ್ಮೀ ಚೌಧರಿ

ಕುಂದಾಪುರ, ಮೇ 24: ಮಕ್ಕಳಿಗೆ ತಾಯಿ ಮೊದಲ ಗುರುವಾಗಿ, ಮನೆ ಮೊದಲ ಪಾಠಶಾಲೆಯಾಗಬೇಕು. ತಾಯಂದಿರೇ ತಮ್ಮ ಮಕ್ಕಳನ್ನು ತಿದ್ದುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಕಲಿಸಿದಾಗ ಮಾತ್ರ ಸಮಾಜ ದಲ್ಲಿ ದೌರ್ಜನ್ಯ ಇಲ್ಲದಂತೆ ಮಾಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಜಿಲ್ಲಾ ಚೈತನ್ಯ ಸ್ತ್ರೀ ಶಕ್ತಿ ಒಕ್ಕೂಟ ಉಡುಪಿ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಉಡುಪಿ, ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಉಡುಪಿ ಹಾಗೂ ವಿವಿಧ ಸಂಘಟನೆಯ ಸಹಯೋಗದೊಂದಿಗೆ ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಮಹಿಳಾ ಸ್ಪಂದನಾ ಸಮಾವೇಶ ನಿಮ್ಮ ದೂರು ನಮ್ಮ ಪರಿಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾ ಚೈತನ್ಯ ಸ್ತ್ರೀ ಶಕ್ತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೇಮಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶ್ರೀಲತಾ ಸುರೇಶ ಶೆಟ್ಟಿ, ವಿಕಲ ಚೇತನಾ ಇಲಾಖೆ ಅಧಿಕಾರಿ ರತ್ನಾ, ರಾಜ್ಯ ಸ್ಟೇಟ್ ಹೋಮ್ ಅಧೀಕ್ಷಕಿ ಪುಷ್ಪಾ ರಾಣಿ, ಸಿಡಿಪಿಒ ಉಮೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ದೂರನ್ನು ಮಹಿಳೆಯರು ಸೇರಿದಂತೆ ಸಾರ್ವಜನಿಕರು ಆಯೋಗದ ಅಧ್ಯಕ್ಷರಿಗೆ ನೀಡಿದರು. ದೂರಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಿ ಸಮಸ್ಯೆ ಯನ್ನು ಬಗೆಹರಿಸಲು ಅವರು ಸೂಚನೆ ನೀಡಿದರು.
ವಸಂತಿ ಕೊರೋಡ್ಕಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು. ಸುಗುಣ ವಂದಿಸಿದರು.






