ಕಾರು ಢಿಕ್ಕಿ: ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ಮೃತ್ಯು

ಶಂಕರನಾರಾಯಣ, ಮೇ 24: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೇ 23ರಂದು ಸಂಜೆ ವೇಳೆ ತಾರೇಮರನ ಜೆಡ್ಡು ಎಂಬಲ್ಲಿ ನಡೆದಿದೆ.
ಮೃತರನ್ನು ಮಂಜುಳಾ ಪೂಜಾರ್ತಿ(50) ಎಂದು ಗುರುತಿಸಲಾಗಿದೆ. ಉಳ್ಳೂರಿನ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇವರು, ತಾರೇಮರನ ಜೆಡ್ಡುವಿನಲ್ಲಿರುವ ಅಣ್ಣನ ಮನೆಗೆ ಬಂದು ವಾಪಾಸ್ಸು ತನ್ನ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದರು.
ಈ ವೇಳೆ ಅಂಪಾರು ಕಡೆಯಿಂದ ಶಂಕರನಾರಾಯಣ ಕಡೆಗೆ ಹೋಗುತ್ತಿದ್ದ ಕಾರು, ಒಮ್ಮೆಲೆ ರಸ್ತೆಯ ಬಲಬದಿಗೆ ತಿರುಗಿಸಿದ ಪರಿಣಾಮ ರಸ್ತೆ ಬದಿ ಬಸ್ಸಿಗೆ ಕಾಯುತ್ತಿದ್ದ ಮಂಜುಳಾ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಂಜುಳಾ, ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




