ಬೇಕರಿ ಮಾಲಕನಿಗೆ ಚೂರಿ ಇರಿದು ಹಲ್ಲೆ: ಪ್ರಕರಣ ದಾಖಲು

ಉಡುಪಿ, ಮೇ 23: ವೈಯಕ್ತಿಕ ಕಾರಣಕ್ಕಾಗಿ ಬೇಕರಿ ಮಾಲಕರೊಬ್ಬರಿಗೆ ಸಮೀಪದ ಬೇಕರಿಯ ಮಾಲಕನೋರ್ವ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಮೇ 23ರಂದು ಮಧ್ಯಾಹ್ನ ವೇಳೆ ಕರಾವಳಿ ಬೈಪಾಸ್ ಬಳಿ ನಡೆದಿದೆ.
ಕಿದಿಯೂರು ಗ್ರಾಮದ ಮುರಳೀಧರ(35) ಎಂಬವರು ಕರಾವಳಿ ಬೈಪಾಸ್ ಬಳಿಯ ಸಾಗರ್ ಗಂಗಾ ಕಟ್ಟಡದ ನೆಲ ಅಂತಸ್ತಿನಲ್ಲಿ ಪೂಜಾ ಬೇಕರಿ ಎಂಬ ಅಂಗಡಿಯನ್ನು ಕಳೆದ 20 ವರ್ಷಗಳಿಂದ ನಡೆಸಿಕೊಂಡಿದ್ದರು. ಅವರ ಅಂಗಡಿಗೆ ತಾಗಿಕೊಂಡು ಅಶೋಕ ಎಂಬಾತನು ಸುಮಾರು ಒಂದು ವರ್ಷಗಳಿಂದ ಕೃಷ್ಣ ಬೇಕರಿ ಅಂಗಡಿಯನ್ನು ನಡೆಸಿಕೊಂಡಿದ್ದಾನೆ.
ಮುರಳೀಧರ್ ಅಂಗಡಿಯಲ್ಲಿ ವ್ಯವಹಾರ ಮಾಡುತ್ತಿರುವಾಗ ಅಶೋಕ ಒಮ್ಮಲೇ ಬೇಕರಿ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಅಂಗಡಿಯೊಳಗೆ ನುಗ್ಗಿ, ಮುರಳೀಧರ್ ಹಲ್ಲೆ ನಡೆಸಿ, ಚೂರಿಯಿಂದ ಎದೆ ಹಾಗೂ ಕುತ್ತಿಗೆಗೆ ಚುಚ್ಚಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




