ವಂಡ್ಸೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

ಕುಂದಾಪುರ: ವಂಡ್ಸೆ ಸಮೀಪದ ಕರ್ಕುಂಜೆ ಗ್ರಾಮದ ನೆಂಪು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳವು ಮಾಡಿರುವ ಪ್ರಕರಣ ಮೇ.23ರಂದು ರಾತ್ರಿ ಬೆಳಕಿಗೆ ಬಂದಿದೆ.
ರೋಬೋಸಾಪ್ಟ್ ಕಂಪೆನಿಯ ಪ್ರೋಗ್ರಾಂ ಹೆಡ್ ಆಗಿರುವ ನಿರಂಜನ್ ಭಟ್ ಎಂಬವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಮೇ.23 ರಂದು ಬೆಳಿಗ್ಗೆ ಹೊತ್ತಿಗೆ ಮನೆಗೆ ಬೀಗ ಹಾಕಿ ಪತ್ನಿ, ಮಕ್ಕಳೊಂದಿಗೆ ಉಡುಪಿಗೆ ಹೋಗಿದ್ದ ಅವರು ಉಡುಪಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬಂದಾಗ ಮುಂಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ.
ಒಳಗಡೆಯ ಬೆಡ್ ರೂಮ್ ಬೀಗವನ್ನು ಒಡೆದಿದ್ದು ರೂಮಿನಲ್ಲಿದ್ದ ಕಬ್ಬಿಣದ ಅಲ್ಮೇರಾ ಹಾಗೂ ಇನ್ನೊಂದು ಮರದ ಅಲ್ಮೇರಾದ ಬೀಗವನ್ನು ಒಡೆದು ಅದರಲ್ಲಿದ್ದ ಚಿನ್ನದ ಕಿವಿ ಓಲೆಗಳು, ನೆಕ್ಲೆಸ್‌ಗಳು, ಪೆಂಡೆಂಟ್, ತುಳಸಿ ಮಣಿ ಸರ, ಚಿನ್ನದ ರುದ್ರಾಕ್ಷಿ ಮಾಲೆ, ಚಿನ್ನದ ಸರ,ಉಂಗುರಗಳು, ಬಳೆಗಳು, ಬ್ರಾಸ್ಲೆಟ್ ಸಹಿತ 18 ಲಕ್ಷ 42 ಸಾವಿರ ಮೌಲ್ಯದ 308 ಗ್ರಾಂ ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಹರಿವಾಣ, ಕವಳಿಗೆ ಸೌಟು, ನಾಣ್ಯಗಳು, ದೀಪಗಳು, ಲೋಟ, ಬೆಳ್ಳಿಯ ಬುಟ್ಟಿಗಳು, ಶಂಖ ಸಹಿತ ಒಟ್ಟು 2 ಕೆಜಿಯ 3 ಲಕ್ಷ ರೂ. ಮೌಲ್ಯದ ಬೆಳ್ಳಿ ಸಾಮಾಗ್ರಿಗಳು, ಚಿಲ್ಲರೆ ಸಹಿತ 1 ಲಕ್ಷ ರೂ. ನಗದು ಕಳವಾಗಿದ್ದು ಎಲ್ಲದರ ಒಟ್ಟು ಮೌಲ್ಯ 22 ಲಕ್ಷ 42 ಸಾವಿರ ಆಗಿದೆ.
ಪೊಲೀಸರ ತಂಡ, ಶ್ವಾನದಳ, ಸೋಕೋ ತಂಡ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನಿರಂಜನ್ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






