ಪ್ರತಿಷ್ಠಿತ ಎಫ್‌ಆರ್‌ಸಿಪಿ ಎಡಿನ್‌ಬರ್ಗ್ ಫೆಲೋಶಿಪ್ ಗೌರವ ಪಡೆದ ಡಾ.ಉನ್ನಿಕೃಷ್ಣನ್, ಡಾ.ಶಿರನ್‌ಗೆ ಮಾಹೆಯಿಂದ ಸನ್ಮಾನ

ಉಡುಪಿ, ಜೂ.9: ಎಡಿನ್‌ಬರ್ಗ್‌ನ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಸಂಸ್ಥೆಯ ಗೌರವಾನ್ವಿತ ಫೆಲೋ ಆಗಿ ಆಯ್ಕೆಯಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂಗಸಂಸ್ಥೆ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಇಬ್ಬರು ಹಿರಿಯ ವೈದ್ಯರನ್ನು ಮಂಗಳವಾರ ಮಾಹೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮಂಗಳೂರು ಕೆಎಂಸಿಯ ಡೀನ್ ಹಾಗೂ ಸಮುದಾಯ ಆರೋಗ್ಯ ವಿಭಾಗದ ಪ್ರೊಫೆಸರ್ ಡಾ.ಬಿ. ಉನ್ನಿಕೃಷ್ಣನ್ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಉಪ ವೈದ್ಯಕೀಯ ಅಧೀಕ್ಷಕ ಹಾಗೂ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗದ ಪ್ರೊಫೆಸರ್ ಡಾ. ಶಿರನ್ ಶೆಟ್ಟಿ ಅವರೇ ಪ್ರತಿಷ್ಠಿತ ಎಫ್‌ಆರ್‌ಸಿಪಿ ಫೆಲೋಶಿಪ್ ಪಡೆದು ಇಂದು ಸನ್ಮಾನಿತರಾದ ತಜ್ಞ ವೈದ್ಯರಾಗಿದ್ದಾರೆ.
ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಹಾಗೂ ಕೊಡುಗೆಗಳನ್ನು ನೀಡಿದ ವೈದ್ಯರಿಗೆ ಜಾಗತಿಕ ಮಟ್ಟದ ಮನ್ನಣೆಯಾಗಿ ಕೊಡಮಾಡುವ ಪ್ರತಿಷ್ಠಿತ ರಾಯಲ್ ಕಾಲೇಜ್ ಫೆಲೋಶಿಪ್ ಅನ್ನು ಡಾ.ಬಿ. ಉನ್ನಿಕೃಷ್ಣನ್ ಹಾಗೂ ಡಾ. ಶಿರನ್ ಶೆಟ್ಟಿ ಅವರಿಗೆ ನೀಡಲಾಗಿದೆ.
ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಈ ಸಂದರ್ಭದಲ್ಲಿ ಮಾತನಾಡಿ, ಡಾ. ಬಿ.ಉನ್ನಿಕೃಷ್ಣನ್ ಹಾಗೂ ಡಾ.ಶಿರನ್ ಶೆಟ್ಟಿ ಅವರು ಪ್ರತಿಷ್ಠಿತ ಎಫ್‌ಆರ್‌ಸಿಪಿ ಫೆಲೋ ಆಗಿ ಆಯ್ಕೆಯಾಗಿರುವುದು ಮಾಹೆ ಸಂಸ್ಥೆಗೆ ಹಾಗೂ ಇಡೀ ಶೈಕ್ಷಣಿಕ ಮತ್ತು ವೈದ್ಯಕೀಯ ಜಗತ್ತಿಗೆ ಅಪಾರ ಹೆಮ್ಮೆಯ ವಿಷಯ. ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮನ್ನಣೆಯು ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರಗಳಿಗೆ ಅವರು ನೀಡಿರುವ ಅತ್ಯುತ್ತಮ ಕೊಡುಗೆಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
ಮಾಹೆ ಕುಲಪತಿ ಡಾ.ಶರತ್ ಕೆ. ರಾವ್ ಮಾತನಾಡಿ, ಡಾ.ಉನ್ನಿಕೃಷ್ಣನ್ ಹಾಗೂ ಡಾ.ಶಿರನ್ ಶೆಟ್ಟಿ ಅವರ ಈ ಸಾಧನೆ ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆ ಗಳನ್ನು ಇದು ಎತ್ತಿ ತೋರಿಸುತ್ತದೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಆರೋಗ್ಯ ರಕ್ಷಣೆಯ ಪ್ರಗತಿಗೆ ಮುಡುಪಾದ ಅವರ ಸೇವೆ ಸಂಸ್ಥೆಗೆ ಅಪಾರ ಕೀರ್ತಿ ತಂದಿದೆ ಹಾಗೂ ವೈದ್ಯಕೀಯ ಮತ್ತು ಶೈಕ್ಷಣಿಕ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದೆ ಎಂದರು.
1681ರಲ್ಲಿ ಆರಂಭವಾದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಫ್ ಎಡಿನ್ಬರ್ಗ್ ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಸಂಸ್ಥೆಯಾಗಿದ್ದು, ಜಾಗತಿಕವಾಗಿ ರೋಗಿಗಳ ಆರೈಕೆ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟ ವನ್ನು ಹೆಚ್ಚಿಸುವ ಗುರಿ ಹೊಂದಿದೆ.
ಕಾರ್ಯಕ್ರಮದಲ್ಲಿ ಮಾಹೆಯ ಸಹಕುಲಪತಿ (ಮಂಗಳೂರು ಕ್ಯಾಂಪಸ್) ಡಾ. ದಿಲೀಪ್ ನಾಯಕ್ ಸ್ವಾಗತಿಸಿದರು. ಕುಲಸಚಿವ ಡಾ. ಗಿರಿಧರ ಕಿಣಿ ವಂದಿಸಿದರು. ಮಾಹೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯ ಕಾಲೇಜಿನ ಹಿರಿಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.






