ವಯಸ್ಸಿನ ಚಂಚಲತೆಗೆ ಒಳಗಾಗಿ ಬದುಕು ಹಾಳುಮಾಡಿಕೊಳ್ಳದಿರಿ: ನ್ಯಾ.ಎಂ.ಪುರುಷೋತ್ತಮ್

ಕಾಪು: 18 ರಿಂದ 20ರ ವಯಸ್ಸು ತಂತಿಯ ಮೇಲಿನ ನಡಿಗೆ ಇದ್ದಂತೆ. ಈ ವಯಸ್ಸಲ್ಲಿ ನಮಗೇನು ಅರಿವಿರುವುದಿಲ್ಲ. ಹೀಗಾಗಿ ದುಶ್ಚಟಗಳಿಗೆ ಬಲಿಯಾಗದೇ, ಉತ್ತಮ ಮಾರ್ಗದಲ್ಲಿ ನಡೆಯಬೇಕು. ಕಾನೂನಿನ ಅರಿವು ಬೆಳೆಸಿಕೊ ಳ್ಳುವುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಪುರುಷೋತ್ತಮ್ ಹೇಳಿದ್ದಾರೆ.
ಕಾಪು ದಂಡತೀರ್ಥ ಪಿಯು ಕಾಲೇಜಿನಲ್ಲಿ ಮಂಗಳವಾರ ಪೋಕ್ಸೊ ಕಾಯ್ದೆಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. 18 ವರ್ಷದ ಒಳಗಿನ ಗಂಡು ಅಥವಾ ಹೆಣ್ಣುಮಕ್ಕಳ ಜೊತೆ ಯಾರೇ ಯಾವುದೇ ರೀತಿಯಲ್ಲಿ ಅಸಭ್ಯ ವಾಗಿ ವರ್ತಿಸಿದರೂ ಅದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಅರ್ಹವಾಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪೋಕ್ಸೊ ಕಾಯ್ದೆಯ ಕುರಿತು ಅರಿತುಕೊಳ್ಳಬೇಕು ಎಂದರು.
ಇಬ್ಬರು ಪ್ರೀತಿಸಿದ ನಂತರ ವಿದ್ಯಾರ್ಥಿನಿಯ ಪೋಷಕರು ಆಕೆಗಿನ್ನು 18 ತುಂಬಿಲ್ಲ ಎಂದು ದೂರು ಕೊಟ್ಟರೇ, ಪೋಕ್ಸೊ ಪ್ರಕರಣದಲ್ಲಿ ಆತ ಬಂಧನಕ್ಕೊಳಗಾಗುತ್ತಾನೆ. ಹೀಗಾಗಿ ವಿದ್ಯಾರ್ಥಿಗಳು ಹದಿಹರೆಯದ ಆಕರ್ಷಣೆಗಳಿಗೆ ಒಳಗಾಗದೇ, ಉತ್ತಮ ವಿದ್ಯಾರ್ಥಿಗಳಿಗಾಗಿ, ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಶ್ಲೀಲ ಪೋಟೋ ನೋಡುವುದು ಅಪರಾಧವಾಗಿದೆ. ಪ್ರಕರಣದ ಬಗ್ಗೆ ತಿಳಿದು, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡದೇ ಇರುವುದು, ಸುಳ್ಳು ಪ್ರಕರಣ ದಾಖಲಿಸುವುದು, ಈ ಎಲ್ಲಾ ಕೃತ್ಯಗಳನ್ನು ತಪ್ಪು ಎಂದು ಕಾಯ್ದೆ ತಿಳಿಸಿದ್ದು, ಶಿಕ್ಷೆಯನ್ನು ವಿಧಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಈ ಕಾಯ್ದೆಯ ಬಗ್ಗೆ ತಿಳಿದುಕೊಂಡು, ಇತರರಿಗೂ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಡಾ.ಕೆ.ಪ್ರಶಾಂತ್ ಶೆಟ್ಟಿ ಮಾತನಾಡಿ, ಹದಿಹರೆಯದಲ್ಲಿ ಮಕ್ಕಳಿಗೆ ಇಂತಹ ಕಾನೂನು ರೀತಿಯ ಮಾರ್ಗದರ್ಶನ ಅಗತ್ಯವಾಗಿ ದೊರಕಿದಾಗ, ಮಕ್ಕಳು ಅಪರಾಧ ಮುಕ್ತ ಬದುಕಿನಲ್ಲಿ ಜೀವನ ನಡೆಸುತ್ತಾರೆ ಎಂದು ಹೇಳಿದರು.
ಪತ್ರಕರ್ತ ರಕ್ಷಿತ್ ಬೆಳಪು, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ ನಾಯ್ಕ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.






