ಆಗುಂಬೆ ಘಾಟ್| ತುರ್ತು ಕಾಮಗಾರಿಗೆ ಸಿಆರ್‌ಎಫ್‌ನಿಂದ 15 ಕೋಟಿ ರೂ. ಮಂಜೂರಾತಿ: ಸಂಸದ ಕೋಟ

ಉಡುಪಿ, ಜೂ.9: ಆಗುಂಬೆ ಘಾಟಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತಾಗಿ ತಿರುವಿನ ದಂಡೆಗಳಲ್ಲಿ 1000ಮೀ.ನಷ್ಟು ತಡೆಬೇಲಿ ನಿರ್ಮಿಸಲು ಸೂಚಿಸಲಾಗಿದೆ. ತಿರುವುಗಳ ಕುಸಿತ ಮತ್ತು ಘಾಟಿ ರಸ್ತೆ ದುರಸ್ತಿಗೆ ಕೇಂದ್ರ ಸರಕಾರದಿಂದ 15 ಕೋಟಿ ರೂ. ಕಾಮಗಾರಿ ಪ್ರಸ್ತಾಪನೆಗೆ ಮಂಜೂರಾತಿ ದೊರಕಿದ್ದು, ಮಳೆಗಾಲ ಮುಗಿಯುತ್ತಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾ ಗುವುದು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಆಗುಂಬೆ ಘಾಟಿಯಲ್ಲಿ ವಾಹನಗಳ ಒತ್ತಡದಿಂದ ಆಗಾಗ ಟ್ರಾಫಿಕ್ ಜಾಮ್, ಕೆಲವು ತಿರುವಿನ ದಂಡೆಗಳ ಕುಸಿತದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಅಧಿಕಾರಿ ಗಳೊಂದಿಗೆ ಆಗುಂಬೆ ಘಾಟಿಯ ತಿರುವುಗಳ ವೀಕ್ಷಣೆ ನಡೆಸಿದ ಬಳಿಕ ಅವರು ಈ ವಿಷಯ ತಿಳಿಸಿದರು.
ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುವ ಪಕ್ಕದ ಹುಲಿಕಲ್ ಘಾಟಿಯಲ್ಲಿ ವಾಹನ ಸಂಚಾರಕ್ಕೆ ನಿಬರ್ಂಧವಿರುವುದರಿಂದ ಆಗುಂಬೆ ಘಾಟಿ ಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದು ಮತ್ತು ನಿರ್ಬಂಧವಿದ್ದರೂ ಜಲ್ಲಿಕಲ್ಲು ಮತ್ತು ಭಾರೀ ತೂಕದ ವಾಹನಗಳ ಚಲಿಸುವಿಕೆಯಿಂದ ಭೂಕುಸಿತದ ಸಾಧ್ಯತೆಯ ಕುರಿತಂತೆ ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.
ಆಗುಂಬೆ ಘಾಟಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ಮತ್ತು ಈಗಿರುವ ರಸ್ತೆಗಳ ದ್ವಿಪಥದ ಬಗ್ಗೆ ಡಿಪಿಆರ್‌ಗಾಗಿ ಟೆಂಡರ್ ಕರೆಯಲಾಗಿದ್ದು ಸಾಧ್ಯತಾ ವರದಿ ಯವಲಂಬಿಸಿ ಎರಡು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸುವಂತೆ ಎನ್‌ಹೆಚ್‌ಆರ್ ಅಧಿಕಾರಿ ಶ್ರೀಧರಗೆ ಸಂಸದ ಕೋಟ ಸಲಹೆ ನೀಡಿದರು.
ಹೆದ್ದಾರಿ ಅಧಿಕಾರಿಗಳು ಭಾರಿ ತೂಕದ ವಾಹನಗಳನ್ನು ನಿಬರ್ಂಧಿಸದಿದ್ದರೆ ಮಳೆಗಾಲದಲ್ಲಿ ಘಾಟಿ ಕುಸಿಯುವ ಅಪಾಯದ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿ ಗಳಿಗೆ ಅಗತ್ಯ ಸಲಹೆ ನೀಡಬೇಕೆಂದು ವಿನಂತಿಸಿದರು. ರಸ್ತೆ ದ್ವಿಪಥವಾಗ ಬೇಕಿದ್ದರೆ ಎಂಟನೇ ತಿರುವಿನ ನಂತರದ ಮೇಲ್ಭಾಗದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಸರಳ ಆ್ಯಪ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲು ಕೋಟ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರೊಂದಿಗೆ ಆಗುಂಬೆ ವನ್ಯಜೀವಿ ವಲಯದ ಅಮಾಸೆಬೈಲು ಅರಣ್ಯಾಧಿಕಾರಿ ರೂಪೇಶ್ ಚೌವ್ಹಾಣ್, ಸೋಮೇಶ್ವರ ವನ್ಯಜೀವಿ ವಲಯದ ಹೆಬ್ರಿ ಅರಣ್ಯಾಧಿಕಾರಿ ಚಿದಾನಂದಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನವೀನ್ ಮತ್ತು ಸಹಾಯಕ ಶಶಿಧರ್ ಉಪಸ್ಥಿತರಿದ್ದರು.






