ಫೆ.9: ಉಡುಪಿ ಧರ್ಮಾಧ್ಯಕ್ಷರ ಅಮೃತಮಹೋತ್ಸವ- ಬಿಷಪ್ ದೀಕ್ಷೆಯ ರಜತ ಮಹೋತ್ಸವ

ಉಡುಪಿ, ಫೆ.5: ಕಥೊಲಿಕ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವವನ್ನು ಫೆ.9ರಂದು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ತೆರೆದ ಮೈದಾನದಲ್ಲಿ ಆಯೋಜಿಸಲಾಗಿದೆ.
ಸಂಜೆ 4 ಗಂಟೆಗೆ ಕೃತಜ್ಞತಾ ಬಲಿಪೂಜೆ ಹಾಗೂ ಸಾರ್ವಜನಿಕ ಸನ್ಮಾನ ಸಮಾರಂಭ ಜರಗಲಿದ್ದು, ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಭಾರತ ಮತ್ತು ನೇಪಾಳದ ರಾಯಭಾರಿ ಅತೀ ವಂ.ಡಾ.ಲಿಯೊಪೊಲ್ಡೊ ಗಿರೆಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ದೇಶದ ಸುಮಾರು 18 ಮಂದಿ ಧರ್ಮಾಧ್ಯಕ್ಷರುಗಳು, 200ಕ್ಕೂ ಅಧಿಕ ಧರ್ಮಗುರು ಗಳು ಹಾಗೂ 4000 ಭಕ್ತಾದಿಗಳು ಭಾಗವಹಿಸಲಿವೆ.
1949 ನ.12ರಂದು ಬಂಟ್ವಾಳ ತಾಲೂಕಿನ ಅಗ್ರಾರ್ನಲ್ಲಿ ಜನಿಸಿದ ಬಿಷಲ್ ಜೆರಾಲ್ಡ್ ಲೋಬೊ ಅವರ ಧಾರ್ಮಿಕ ಜೀವನ 15ನೇ ವಯಸ್ಸಿಗೆ ಆರಂಭವಾಯಿತು. 1977ರಲ್ಲಿ ಅಂದಿನ ಮಂಗಳೂರು ಬಿಷಪ್ ದಿ. ಅತಿ ವಂ.ಡಾ.ಬೆಸಿಲ್ ಎಸ್ ಡಿಸೋಜರಿಂದ ಧಾರ್ಮಿಕ ದೀಕ್ಷೆಯನ್ನು ಸ್ವೀಕರಿಸಿದರು. 2000ರ ಮಾ.20ರಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷರಾಗಿ ಅಭಿಷಿಕ್ತರಾಗಿ ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಸಿದರು. 2012ರಲ್ಲಿ ನೂತನವಾಗಿ ಘೋಷಣೆಯಾದ ಉಡುಪಿ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕ ಗೊಂಡರು.
ಇವರ ಅವಧಿಯಲ್ಲಿ ಪಾಲನಾ ಯೋಜನೆ 2025 ಅನುಷ್ಠಾನಗೊಂಡು 2030ಕ್ಕೆ ಮುಂದುವರೆದಿದೆ. ಉಡುಪಿ ಧರ್ಮ ಪ್ರಾಂತ್ಯದ ಪಾಲನಾ ಯೋಜನೆ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಧರ್ಮಾಧ್ಯಕ್ಷ ಲೋಬೊ ನೇತೃತ್ವದಲ್ಲಿ ಉಡುಪಿ ಧರ್ಮಪ್ರಾಂತ್ಯವು ಪ್ರಮುಖ ಸಂಸ್ಥೆಗಳಾದ ಪಾಲನಾ ಕೇಂದ್ರ, ನಿವೃತ್ತ ಯಾಜಕರ ನಿವಾಸ, ಕಾರ್ಕಳ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ ಸೇರಿದಂತೆ ಹಲವಾರು ನೂತನ ಚರ್ಚುಗಳನ್ನು ಸ್ಥಾಪಿಸಲು ಕಾರಣವಾಗಿದೆ.
ಧರ್ಮಧ್ಯಕ್ಷ ಲೋಬೊ ಅವರ ದೂರದರ್ಶಿತ್ವ ಹಾಗೂ ನಾಯಕತ್ವಕ್ಕೆ ಗೌರವ ಅಭಿನಂದನೆ ಸಲ್ಲಿಸುವುದು ಭಕ್ತಾದಿಗಳ ಅಪೇಕ್ಷೆಯಾಗಿದೆ. ನಿವೃತ್ತಿಯ ಅಂಚಿನಲ್ಲಿರುವ ಧರ್ಮಾಧ್ಯಕ್ಷರ ಉತ್ತರಾಧಿಕಾರಿ ಕೂಡ ಅವರ ಹಾದಿಯಲ್ಲೇ ಮುನ್ನಡೆಯು ವಂತಾಗಲಿ. ಈ ಮೂಲಕ ಧರ್ಮಪ್ರಾಂತ್ಯವನ್ನು ಸೂಕ್ತ ದಾರಿಯಲ್ಲಿ ಮುನ್ನಡೆಸಲಿ ಎಂಬುದು ಭಕ್ತವೃಂದದ ಬಯಕೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.