ಉಡುಪಿ: ಚಿಟ್ಟಾಣಿ ಯಕ್ಷಗಾನ ಸಪ್ತಾಹ ಉದ್ಘಾಟನೆ

ಉಡುಪಿ: ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ, ಪರ್ಯಾಯ ಪುತ್ತಿಗೆ ಮಠದ ಸಹಯೋಗದೊಂದಿಗೆ ನಡೆಸಿಕೊಂಡು ಬಂದ ಹದಿನೆಂಟನೇ ವರ್ಷದ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಬುಧವಾರ ಸಂಜೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.
ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನದ ಪೂರ್ವ ಪ್ರತಿಭೆ. ಅವರ ಸಂಸ್ಮರಣೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಕಿರಿಯ ಕಲಾವಿದರಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ತೋಳ್ಪಡಿತ್ತಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ತಿಕ ಚಿಟ್ಟಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುರಲಿ ಕಡೆಕಾರ್ ಸಂಯೋಜಿಸಿದ ಕಾರ್ಯಕ್ರಮವನ್ನು ನಾರಾಯಣ ಎಂ. ಹೆಗಡೆ ನಿರೂಪಿಸಿದರು. ಮೊದಲ ಪ್ರದರ್ಶನವಾಗಿ ಗಣೇಶ ಕೊಲೆಕಾಡಿ ಅವರ ‘ಸಮರ ಸೌಗಂಧಿಕಾ’ ಪ್ರಸ್ತುತಗೊಂಡಿತು. ಚಿಟ್ಟಾಣಿ ಸಪ್ತಾಹವು ನ.೫ ರಿಂದ ನ.೧೧ರವರೆಗೆ ನಡೆಯಲಿದೆ.







