ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದ ಬಹುಕೋಟಿ ವಂಚನೆ ಪ್ರಕರಣ: ಯು. ಟಿ. ಖಾದರ್ಗೆ ಮನವಿ
ಉಡುಪಿ: ಅಧಿಕ ಬಡ್ಡಿಯ ಆಸೆ ತೋರಿಸಿ ಜಿಲ್ಲೆಯ ನೂರಾರು ಗ್ರಾಹಕರನ್ನು ವಂಚಿಸಿರುವ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಜಪ್ತಿ ಮಾಡಿ ಮುಟ್ಟುಗೋಲು ಹಾಕಿರುವ ಎಲ್ಲಾ ಸ್ಥಿರ ಹಾಗೂ ಚರ ಆಸ್ತಿಗಳನ್ನು ಸಕ್ಷಮ ಪ್ರಾಧಿಕಾರ ಹಾಗೂ ಸರಕಾರದ ಅಧಿಕೃತ ಮೌಲ್ಯ ಮಾಪಕರಿಂದ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಆದಷ್ಟು ಬೇಗ ಮೌಲ್ಯ ಮಾಪನ ಮಾಡಿಸಿ, ಕೋರ್ಟ್ ತೀರ್ಪು ಬಂದ ತಕ್ಷಣ ಸಂತ್ರಸ್ತರಿಗೆ ಹಣ ಪಾವತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯು. ಟಿ. ಖಾದರ್ ಅವರು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಈ ಕುರಿತಂತೆ ಸಂತ್ರಸ್ತರ ಪರವಾಗಿ ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ರಮೇಶ್ ಪ್ರಭು ಹಾಗೂ ಸಾಮಾಜಿಕ ಕಾರ್ಯ ಕರ್ತರಾದ ಶ್ರೀನಿವಾಸ್ ಪ್ರಭು ಇವರು ನೀಡಿದ ಮನವಿಯನ್ನು ಸ್ವೀಕರಿಸಿದ ಖಾದರ್, ಇಲಾಖೆಗೆ ಈ ಸೂಚನೆ ನೀಡಿದರು.
2022ರ ಡಿಸೆಂಬರ್ ತಿಂಗಳಲ್ಲಿ ಉಡುಪಿಯ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘವು ಠೇವಣಿದಾರ ಗ್ರಾಹಕರಿಗೆ ಅವಧಿ ಮುಗಿದ ಠೇವಣಿ ಹಣವನ್ನು ಹಿಂದಿರುಗಿಸದೇ, ಹಲವು ಕೋಟಿ ರೂ.ಗಳ ಆರ್ಥಿಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಠೇವಣಿದಾರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟ್ ಹಾಕಿಸಿದ್ದರು.
ಬಳಿಕ ಯು.ಟಿ.ಖಾದರ್ ಅವರ ಸಹಕಾರದಿಂದ ರಾಜ್ಯಪಾಲರರ ಮೂಲಕ ಆದೇಶ ಹೊರಡಿಸಿ ಸಂಸ್ಥೆಯ ಆಸ್ತಿಪಾಸ್ತಿ ಮುಟ್ಟು ಗೋಲು ಹಾಕಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಮತ್ತೊಮ್ಮೆ ನೀಡಿದ ಮನವಿಯಂತೆ ಖಾದರ್ ಅವರು ಕಂದಾಯ ಇಲಾಖೆ ಈ ಸಂಬಂಧ ನಿರ್ದೇಶನ ನೀಡುವ ಮೂಲಕ ಹಣ ಕಳೆದುಕೊಂಡ ಸಂತ್ರಸ್ತರಿಗೆ ಭರವಸೆಯ ಆಶಾಕಿರಣವಾಗಿದ್ದಾರೆ ಎಂದು ಸಂತ್ರಸ್ಥರು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.