ಕಾರ್ಕಳ | ಮುಂದಿನ ಪೀಳಿಗೆ ಒಟ್ಟಿಗೆ ಬದುಕಲು ಎಲ್ಲ ಭಾಷೆಗಳು ಮುಖ್ಯ : ಜಯಪ್ರಕಾಶ್ ಹೆಗ್ಡೆ

ಕಾರ್ಕಳ, ಡಿ.9: ಮಾತೃಭಾಷೆ ಯಾವುದಾದರೂ ಕನ್ನಡ ಭಾಷೆ ಸದಾ ನಮಗೆ ಮುಖ್ಯವಾಗಬೇಕು. ಮುಂದಿನ ಪೀಳಿಗೆಯವರೆಲ್ಲ ಒಟ್ಟಿಗೆ ಬದುಕಬೇಕಾದರೆ, ಎಲ್ಲ ಭಾಷೆಗಳು ಬಹಳ ಮುಖ್ಯವಾಗುತ್ತದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕಾರ್ಕಳ ಭುವನೇಂದ್ರ ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಸಾಹಿತ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಎವಿ ಸಭಾಂಗಣದಲ್ಲಿ ಆಯೋಜಿಸಲಾದ ಕನ್ನಡ ನಾಡು ನುಡಿ, ಚಿಂತನೆ, ಸಂವಾದ ‘ಕನ್ನಡ ಭಾವಗಾಯನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕನ್ನಡ ಭಾಷೆಯು ಬೇರೆಬೇರೆ ಪ್ರದೇಶಗಳಿಗೆ ವಿಸ್ತರಿಸಿದಾಗ ಅದರ ಸ್ವರೂಪ ಬದಲಾಗುತ್ತದೆ. ಭಾಷೆಯಲ್ಲಿ ಏಕವಚನ, ಬಹುವಚನ ಪದಪ್ರಯೋಗ ಇದ್ದರೂ ಭಾವ ಬದಲಾಗುವುದಿಲ್ಲ. ನಾನು ಹುಟ್ಟಿದ್ದು, ಬೆಳೆದಿದ್ದು, ಕೆಲಸ ಕಾರ್ಯಗಳೆಲ್ಲವೂ ಬೇರೆ ಬೇರೆ ಪ್ರದೇಶಗಳನ್ನು ಒಳಗೊಂಡಿರುವುದರಿಂದ ಅದರೊಳಗಿನ ಎಲ್ಲ ಭಾವಗಳೂ ನನಗೆ ಅರಿವಾಗುತ್ತವೆ ಎಂದರು.
ನಮ್ಮ ಹಿರಿಯರನ್ನು ಮಾತನಾಡಿಸಿದಾಗ ಅನೇಕ ಹೊಸ ಶಬ್ದಗಳು ನಮಗೆ ದೊರೆತು ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ಬರಹಗಾರರ ಭಾಷಣಗಳನ್ನು ಕೇಳುವಾಗ ಬೇಕಾದ ಎಲ್ಲ ಮಾಹಿತಿಗಳು ಸಿಗುತ್ತವೆ. ಅದನ್ನು ನಾವು ಆಲಿಸಬೇಕು. ಎರಡು ಮೂರು ಭಾಷೆಗಳನ್ನು ಮಿಶ್ರ ಗೊಳಿಸಿ ಮಾತನಾಡಿದರೆ ಅದು ಅಪಾರ್ಥ ಎನಿಸುತ್ತದೆ. ಇದು ಪ್ರತಿಯೊಂದು ಭಾಷೆಗೂ ಅಪಾಯ ಉಂಟು ಮಾಡುತ್ತದೆ. ಈ ಬಗ್ಗೆ ಎಲ್ಲ ತಲೆಮಾರಿನಲ್ಲೂ ಎಚ್ಚರ ಇರಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ಸಂಘರ್ಷವಾಗದ ಅನುಸಂಧಾನ ಪದ ಬಳಕೆ, ಆಲೋಚನಾ ಕ್ರಮ, ಓದು, ಭಾಷೆ ಕಟ್ಟಿಕೊಡುವ ರೀತಿಯ ಚಿಂತನಾ ಕ್ರಮಗಳು ಕನ್ನಡ ಭಾಷೆಯಲ್ಲಿ ಇರಬೇಕು. ಬಹುತ್ವದ ಕನ್ನಡದ ಬಗ್ಗೆ ಚರ್ಚೆ, ಪ್ರಾದೇಶಿಕ ಭಾಷೆಗಳ ಮಹತ್ವ ಮತ್ತು ಅದರ ಬಳಕೆ ಬಗ್ಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ಎಲ್ಲ ವಿಚಾರಗಳಲ್ಲೂ ವೈರುಧ್ಯಗಳು ಇರುತ್ತವೆ. ವೈರುಧ್ಯಗಳ ಹಿಂದಿನ ವಿವೇಕಪ್ರಜ್ಞೆಯನ್ನು ನಾವು ಅರಿತಿರಬೇಕು. ಆಗ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಲು ಸಾಧ್ಯ. ಭಾಷೆಯನ್ನು ವಿವೇಕದಿಂದ ಬಳಸಿದಾಗ ಅದು ಮುಂದಿನ ಕಾಲಕ್ಕೂ ಪ್ರಸಾರ ಆಗುತ್ತಿರುತ್ತದೆ. ಈ ಪ್ರಸರಣವೇ ಭಾಷೆಯ ಗೆಲುವು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಈಶ್ವರ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ.ಲಕ್ಷ್ಮೀನಾರಾಯಣ ಕೆ.ಎಸ್., ಸಾಹಿತ್ಯ ಸಂಘದ ಪ್ರತಿನಿಧಿಗಳಾದ ಪ್ರಾರ್ಥನಾ ಹಾಗೂ ಶ್ರೀನಿಧಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಹಾಗೂ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕರಾದ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಪಚ್ಚಿನಡ್ಕ ವಂದಿಸಿದರು. ಬಳಿಕ ವಿದ್ಯಾರ್ಥಿಗಳಾದ ರಕ್ಷಿತಾ, ಸನ್ನಿಧಿ ಮತ್ತು ಬಳಗದಿಂದ ಕನ್ನಡ ಭಾವಗಾಯನ ನಡೆಯಿತು. ಕೆ.ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ನಡೆದ ಸಂವಾದದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡರು.







