ಅಂಬಾಗಿಲು ಮಾರ್ಗವಾಗಿ ಸಂಚರಿಸುವಂತೆ ಬಸ್ ಚಾಲಕರ ಮನವೊಲಿಕೆ
ಉಡುಪಿ: ರೂಟ್ ಪರ್ಮಿಟ್ನಲ್ಲಿರುವಂತೆ ಉಡುಪಿ ನಗರಕ್ಕೆ ಅಂಬಾಗಿಲು- ಗುಂಡಿಬೈಲು-ಕಲ್ಸಂಕ ಮಾರ್ಗವಾಗಿ ಸಂಚರಿಸುವಂತೆ ಖಾಸಗಿ ಬಸ್ಗಳ ಚಾಲಕರು ಹಾಗೂ ನಿವಾರ್ಹಕರನ್ನು ಮನವೊಲಿಸುವ ವಿನೂತನ ಕಾರ್ಯಕ್ರಮವನ್ನು ಇಂದು ಅಂಬಾಗಿಲು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕುಂದಾಪುರ, ಹೂಡೆ, ಸಂತೆಕಟ್ಟೆ ಕಡೆಯಿಂದ ಉಡುಪಿಗೆ ಬರುವ ಖಾಸಗಿ ಸರ್ವಿಸ್ ಹಾಗೂ ಸಿಟಿ ಬಸ್ಗಳು ರೂಟ್ ಪರ್ಮಿಟ್ ನಂತೆ ಅಂಬಾಗಿಲು -ಗುಂಡಿಬೈಲು ಮಾರ್ಗದ ಬದಲು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಸಾಗಿ ಕರಾವಳಿ ಜಂಕ್ಷನ್ ಮಾರ್ಗವಾಗಿ ಉಡುಪಿ ನಗರಕ್ಕೆ ಹೋಗುತ್ತಿತ್ತು. ಇದರಿಂದ ಅಂಬಾಗಿಲು ಪರಿಸರದ ಜನತೆ ಬಸ್ ಸೌಲಭ್ಯದಿಂದ ವಂಚಿತರಾಗುತ್ತಿದ್ದರು.
ಈ ಬಗ್ಗೆ ಕಳೆದ 15 ವರ್ಷಗಳಿಂದ ಸ್ಥಳೀಯರು ಹೋರಾಟ ನಡೆಸಿಕೊಂಡು ಬರುತ್ತಿದ್ದು, ಜಿಲ್ಲಾಧಿಕಾರಿಗಳು ಕೂಡ ಈ ಕುರಿತು ಆದೇಶ ಹೊರಡಿಸಿದ್ದರು. ಆದರೂ ಬಸ್ ಚಾಲಕರು ರೂಟ್ ಪರ್ಮಿಟ್ನ್ನು ನಿರಂತರವಾಗಿ ಉಲ್ಲಂಘಿಸಿ ಅಂಬಾ ಗಿಲು ಮಾರ್ಗವನ್ನು ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಉಡುಪಿಗೆ ಹೋಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆ ಹಿನ್ನೆಲೆಯಲ್ಲಿ ಇಂದು ಅಂಬಾಗಿಲು ಜಂಕ್ಷನ್ನಲ್ಲಿ ಉಡುಪಿ ಆರ್ಟಿಓ ಹಾಗೂ ಟ್ರಾಫಿಕ್ ಪೊಲೀಸರ ಸಹಕಾರದೊಂದಿಗೆ ಸ್ಥಳೀಯರು, ಬಸ್ಗಳನ್ನು ತಡೆದು ‘ವಯ ಗುಂಡಿಬೈಲು ಕಲ್ಸಂಕ’ ಎಂಬ ಸ್ಟಿಕ್ಕರನ್ನು ಬಸ್ಗಳಿಗೆ ಅಂಟಿಸಿ ಚಾಲಕ ಹಾಗೂ ನಿರ್ವಾಹಕರಿಗೆ ಇನ್ನು ಮುಂದೆ ಅಂಬಾಗಿಲು ರಸ್ತೆಯಲ್ಲಿ ಉಡುಪಿ ನಗರಕ್ಕೆ ಹೋಗುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಆಚಾರ್ಯ, ಆರ್ಟಿಓ ಅಧಿಕಾರಿ ಗಳು, ಸ್ಥಳೀಯರು ಮೊದಲಾದವರು ಉಪಸ್ಥಿತರಿದ್ದರು.
‘ಈ ಬಗ್ಗೆ ನಗರಸಭೆಗೆ ಹಲವು ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಆರ್ಟಿಓ ಹಾಗೂ ಟ್ರಾಫಿಕ್ ಪೊಲೀಸರ ಸಹಾಯ ದಿಂದ ಬಸ್ಗಳನ್ನು ತಡೆದು ಚಾಲಕ ಮತ್ತು ನಿರ್ವಾಹಕರ ಮನವೊಲಿಸುವ ಕಾರ್ಯ ಮಾಡಿದ್ದೇವೆ. ಮುಂದೆ ರೂಟ್ ಪರ್ಮಿಟ್ ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಸಂಚರಿಸಿದರೆ ಅಂತಹ ಬಸ್ಗಳ ವಿರುದ್ಧ ಸಂಬಂಧಪಟ್ಟವರು ಕಾನೂನು ಕ್ರಮ ಜರಗಿಸಬೇಕು’
-ಪ್ರಭಾಕರ ಪೂಜಾರಿ, ಅಧ್ಯಕ್ಷರು, ನಗರಸಭೆ ಉಡುಪಿ
‘ಪ್ರತಿವರ್ಷ ಈ ಮಾರ್ಗದಲ್ಲಿ ಸಂಚರಿಸುವಂತೆ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಮನವೊಲಿಸುವ ಪ್ರಯತ್ನ ಮಾಡುತ್ತಿ ದ್ದೇವೆ. ಕೆಲವು ವರ್ಷ ಗಳಿಂದ ಅವರಿಗೆ ಸಿಹಿ ತಿಂಡಿ ಕೂಡ ಹಂಚಿದ್ದೇವೆ. ಆದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಅಟೋ ರಿಕ್ಷಾದಲ್ಲಿ ಅಂಬಾಗಿಲಿನಿಂದ ಕಲ್ಸಂಕಕ್ಕೆ ಹೋಗಲು ೮೫ರೂ. ತೆಗೆದುಕೊಳ್ಳುತ್ತಾರೆ. ಇದರಿಂದ ಪ್ರತಿದಿನ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ ತುಂಬಾ ತೊಂದರೆ ಆಗುತ್ತಿದೆ’
-ಎಂ.ಆರ್.ಪೈ, ಹಿರಿಯ ನಾಗರಿಕರು