ಹೂಡೆ ಸಾಲಿಹಾತ್ ಕಾಲೇಜು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ
ಉಡುಪಿ: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ಉಡುಪಿ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ಮಾತನಾಡಿ, ಕಲಿಕಾ ದಿನಗಳಲ್ಲಿ ವಿದ್ಯಾರ್ಥಿಗಳು ಜೀವನದ ಮೌಲ್ಯವನ್ನು ಮೈಗೂಡಿಸಿಕೊಂಡು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ನಡೆಸಿದರೆ ಮಾತ್ರ ಈ ಪದವಿಗೆ ಗೌರವ ಬರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಇದಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸಿ, ಶಿಕ್ಷಣದ ಧ್ಯೇಯೋದ್ದೇಶ ಈಡೇರಿಸಬೇಕು ಎಂದು ಹೇಳಿದರು.
ಜಮಾಆತೇ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಉಪ ಸಂಚಾಲಕಿ ರೇಷ್ಮಾ ಬೈಲೂರು, ವಿದ್ಯಾರ್ಥಿಗಳಲ್ಲಿ ನೈತಿಕತೆ ಬೆಳೆಸುವ ಕುರಿತು ಉಪನ್ಯಾಸ ನೀಡಿದರು. ಜಮಾತೆ ಎ ಇಸ್ಲಾಮಿ ಹಿಂದ್ ಆಯೋಜಿಸಿರುವ ಸೀರತ್ ಅಭಿಯಾನದ ಅಂಗವಾಗಿ ಪ್ರವಾದಿ(ಸ)ರವರ ಕುರಿತ ಚಿಂತಕರು, ಲೇಖಕರು, ಸಾಹಿತಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಲೇಖಕರುಗಳ ಸಂಗ್ರಹ ಪುಸ್ತಕವನ್ನು ಡಾ.ನಿಕೇತನ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಖಜಾಂಚಿ ಅಬ್ದುಲ್ ಕಾದರ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಟ್ರಸ್ಟಿ ಎಂ.ಶಬ್ಬೀರ್ ಮಲ್ಪೆ, ಪ್ರಾಂಶುಪಾಲ ಡಾ.ಸಬೀನಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಾಸ್ತಾವಿಕ ವಾಗಿ ಮಾತುಗಳನ್ನಾಡಿದರು. ಪದವಿ ವಿದ್ಯಾರ್ಥಿನಿ ಮಿಸ್ಭಾ ಸ್ವಾಗತಿಸಿದರು. ಸಮಾ ವಂದಿಸಿದರು. ಸಮೀಯ ಕಾರ್ಯಕ್ರಮ ನಿರೂಪಿಸಿದರು.