ಮಾನವ ಹೋರಾಟ, ಸಂಘರ್ಷದಿಂದ ಒಳ್ಳೆಯ ಸಾಹಿತ್ಯ: ಚಿಂತಕ ಲಕ್ಷ್ಮೀಶ ತೋಳ್ಪಾಡಿ
ಮಣಿಪಾಲ: ಸಾಮಾನ್ಯವಾಗಿ ಮಾನವ ಹೋರಾಟ ಮತ್ತು ಸಂಘರ್ಷ ದಿಂದ ಒಳ್ಳೆಯ ಸಾಹಿತ್ಯ ಹೊರಹೊಮ್ಮುತ್ತವೆ. ಅವು ಮಾನವ ಅನುಭವದ ಬಗ್ಗೆ ಕಾಲಾತೀತ ಒಳನೋಟಗಳನ್ನು ನೀಡುತ್ತವೆ ಎಂದು ನಾಡಿನ ಖ್ಯಾತ ಚಿಂತಕ ಹಾಗೂ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತ ಕನ್ನಡ ಲೇಖಕ, ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯ ಪಟ್ಟಿದ್ದಾರೆ.
ಖ್ಯಾತ ಕವಯಿತ್ರಿ, ಲೇಖಕಿ, ತುಳು ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಏಕತಾರಿ ಸಂಚಾರಿ’ ಕವನ ಸಂಕಲನದ ಇಂಗ್ಲೀಷ್ ಅನುವಾದ ‘ಟ್ಯೂನ್ಸ್ ಆಫ್ ಎ ಸಿಂಗಲ್ ಸ್ಟ್ರಿಂಗ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನ ಘಟಕವಾದ ಮಣಿಪಾಲ ಯೂನಿವರ್ಸಲ್ ಪ್ರೆಸ್ (ಎಂಯುಪಿ) ಈ ಕೃತಿಯನ್ನು ಪ್ರಕಟಿಸಿದ್ದು, ಖಾತ್ಯ ಅನುವಾದಕ, ನಿವೃತ್ತ ಜರ್ಮನ್ ಭಾಷಾ ಪ್ರಾಧ್ಯಾಪಕ ಡಾ. ಎನ್. ತಿರುಮಲೇಶ್ವರ ಭಟ್ ಕೃತಿಯ ಅನುವಾದಕ ರಾಗಿದ್ದಾರೆ.
ಮಹಾಭಾರತವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ತೋಳ್ಪಾಡಿ, ಸಾಹಿತ್ಯವು ಭಾಷೆಯಂತೆಯೇ ಬಹು ಹಂತಗಳಲ್ಲಿ ಹೇಗೆ ಪ್ರತಿಧ್ವನಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು. ಆಗಾಗ್ಗೆ ಜೀವನದ ಸಂಕೀರ್ಣತೆಗಳ ಉಪಪ್ರಜ್ಞೆ ಅನುವಾದವಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ೨೦೨೩ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿ ಇತ್ತೀಚೆಗೆ ಗುರುತಿಸಿಕೊಂಡಿರುವ ತೋಳ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಪ್ರೊ ವೈಸ್ಚಾನ್ಸೆಲರ್ ಡಾ. ಶರತ್ ರಾವ್ ಅವರು ಕಾವ್ಯದ ಅನುವಾದ ಸಂಕೀರ್ಣ ಕಲೆಯಾಗಿದ್ದು, ಅನುವಾದದಲ್ಲಿರುವ ಅನನ್ಯ ಸವಾಲುಗಳ ಕುರಿತು ವಿವರಿಸಿದರು. ಇದು ದೃಶ್ಯ ಕಲೆಗಿಂತ ಭಿನ್ನವಾಗಿ, ಮುಕ್ತ ವ್ಯಾಖ್ಯಾನಕ್ಕೆ ಅವಕಾಶ ನೀಡುತ್ತದೆ ಎಂದರು.
ಅನುವಾದಕ ಪ್ರೊ.ಡಾ.ಎನ್.ತಿರುಮಲೇಶ್ವರ ಭಟ್ ಅವರು ಅನುವಾದ ಕ್ಷೇತ್ರದಲ್ಲಿ ತಮ್ಮ ವೈಯಕ್ತಿಕ ಪಯಣವನ್ನು ಹಂಚಿಕೊಂಡರು. ತಮಗೆ ಮೊದಲ ಭಾಷಾಂತರ ಪ್ರಾಜೆಕ್ಟ್ ನೀಡಿದ ಗುರುಗಳಾದ ಎಂಜಿಎಂ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ.ಕು.ಶಿ.ಹರಿದಾಸ್ ಭಟ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಸ್ಮರಿಸಿದರು. ಅನುವಾದ, ವಿಶೇಷವಾಗಿ ಸಾಹಿತ್ಯಿಕ ಅನುವಾದವು ಭಾಷೆಯ ಆಚರಣೆಯಾಗಿದೆ ಎಂದರು.
ಏಕತಾರಿ ಸಂಚಾರಿಯ ಮೂಲ ಲೇಖಕಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ಅವರು ಬಾಲ್ಯದಿಂದಲೇ ಕನ್ನಡದ ಪ್ರಮುಖ ವಿದ್ವಾಂಸರ ಪ್ರಭಾವದಿಂದ ಕವಿತೆ ಬರೆಯುವುದು ಆಳವಾಗಿ ಬೇರೂರಿದೆ ಮತ್ತು ರೂಪುಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಎಂಯುಪಿಯ ಮುಖ್ಯ ಸಂಪಾದಕ (ಪ್ರಭಾರ) ಹಾಗೂ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಆಚಾರ್ಯ ಅವರು ಉಪಸ್ಥಿತರಿದ್ದರು.