ರಾಜಕೀಯ ದ್ವೇಷದಿಂದ ಗಾಂಧೀಜಿಗೆ ಖಳನಾಯಕ ಪಟ್ಟ: ಶ್ರೀಕಾಂತ್ ಹೆಮ್ಮಾಡಿ
ಕುಂದಾಪುರ, ಅ.2: ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಗಾಂಧೀಜಿಯವರನ್ನು ದೇವರಂತೆಯೇ ಆರಾಧಿಸುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ರಾಜಕೀಯ ದ್ವೇಷಗಳಿಂದಾಗಿ ಮಹಾತ್ಮ ಗಾಂಧೀಜಿ ಅವರನ್ನು ಖಳನಾಯಕನಾಗಿ ಬಿಂಬಿಸಲಾಗುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ ಎಂದು ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಹೆಮ್ಮಾಡಿ ಜನತಾ ಪ್ರೌಢಶಾಲೆಯಲ್ಲಿ ಬುಧವಾರ ಜರಗಿದ ಗಾಂಧಿ ಜಯಂತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು. ಧರ್ಮ ರಾಜಕಾರಣದ ಕೆಟ್ಟ ಶಕ್ತಿಗಳು ಯುವ ಸಮುದಾಯದ ಮಧ್ಯೆ ಗಾಂಧೀಜಿಯ ಬಗ್ಗೆ ಅಪಪ್ರಚಾರಗಳು, ಅಸಹನೀಯ ಬರಹಗಳನ್ನು ಭಿತ್ತರಿಸಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವಮಾನದ ಪೂರ್ತಿ ಸಮಯವನ್ನು ಮೀಸಲಿಟ್ಟ ಗಾಂಧೀಜಿಯವರ ವ್ಯಕ್ತಿತ್ವ ಹರಣ ಮಾಡುತ್ತಿದೆ ಎಂದರು.
ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಯುವ ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಸುಜಯ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಶ್ರೀಧರ ಗಾಣಿಗ, ಪ್ರವೀತಾ ಅಶೋಕ್, ವಿದ್ಯಾ, ಬೋಧಕೇತರ ಸಿಬ್ಬಂದಿ ಸೌಮ್ಯ, ಪ್ರಾಕ್ತನ ವಿದ್ಯಾರ್ಥಿ ನಾದಶ್ರೀ ಉಪಸ್ಥಿತರಿದ್ದರು. ಶಿಕ್ಷಕರಾದ ವಿಠಲ್ ನಾಯ್ಕ್ ಸ್ವಾಗತಿಸಿದರು. ದೇವೇಂದ್ರ ನಾಯ್ಕ್ ವಂದಿಸಿದರು. ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.