ಠಾಣೆಗೆ ಭೇಟಿ ನೀಡಿ ಪೊಲೀಸರ ಕಾರ್ಯ ವೈಖರಿ ತಿಳಿದುಕೊಂಡ ವಿದ್ಯಾರ್ಥಿಗಳು
ಕುಂದಾಪುರ, ಅ.2: ಪ್ರತಿದಿನ ಪಾಠ ಆಟದ ನಡುವೆ ಶಾಲೆಯಲ್ಲೇ ಕಳೆಯುತ್ತಿದ್ದ ವಿದ್ಯಾರ್ಥಿಗಳು ಗಾಂಧಿ ಜಯಂತಿಯ ಪ್ರಯುಕ್ತ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಕಾರ್ಯವೈಖರಿ ಅರಿತುಕೊಂಡರು.
ಬುಧವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ನ ವಿದ್ಯಾರ್ಥಿಗಳು ಕುಂದಾಪುರ ನಗರ ಠಾಣೆ ಮತ್ತು ಸಂಚಾರಿ ಠಾಣೆಗೆ ’ತೆರೆದ ಮನೆ’ ಯೋಜನೆಯಡಿ ಭೇಟಿ ನೀಡಿದರು.
ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪೊಲೀಸರು ಸಮಾಧಾನದಿಂದ ಉತ್ತರಿಸಿ ದರು. ಠಾಣೆಯಲ್ಲಿ ಪೊಲೀಸರ ಕಾರ್ಯ ವೈಖರಿ, ಮಕ್ಕಳ ಹಕ್ಕುಗಳ ರಕ್ಷಣೆ, ಪೋಕ್ಸೊ ಕಾಯಿದೆ ಕುರಿತು ಅರಿವು ಮೂಡಿಸಲಾಯಿತು. ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬಂದರೆ ಮೊದಲು ದೂರು ತೆಗೆದುಕೊಳ್ಳುವುದು, ಎಫ್ಐಆರ್ ದಾಖಲೆ, ತನಿಖೆ, ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಕೆ, ಅಪರಾಧ ಕೃತ್ಯಗಳ ತನಿಖೆ ಹಾಗೂ ತನಿಖೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಸೇರಿದಂತೆ ವಿವಿಧ ವಿಚಾರಗಳನ್ನು ವಿದ್ಯಾರ್ಥಿ ಗಳಿಗೆ ತಿಳಿಸಿಕೊಡಲಾಯಿತು.
ತಾತ್ಕಾಲಿಕ ಸೆಲ್, ಬೇಡಿ, ಬಂದೂಕು ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಅಪರಾಧ, ರಸ್ತೆ ನಿಯಮಗಳ ಪಾಲನೆ ಕುರಿತು ಮಾಹಿತಿ ನೀಡಲಾಯಿತು. ಕುಂದಾಪುರ ನಗರ ಠಾಣೆ ಪಿಎಸ್ಐ ವಿನಯ್ ಕೊರ್ಲಹಳ್ಳಿ ಮಾತನಾಡಿ, ಕಾನೂನು ಗೌರವಿಸಿ ಪಾಲಿಸುವವರು ಮತ್ತು ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುವವರಿಗೆ ಕಾನೂನಿನ ರಕ್ಷಣೆ ಸದಾ ಕಾಲ ಇರುತ್ತದೆ. ಸಮಾಜದಲ್ಲಿ ಉತ್ತಮ ಹೆಸರು ಮತ್ತು ಗೌರವ ಸಲ್ಲುತ್ತದೆ ಎಂದರು.
ಮಹಿಳಾ ಸಿಬ್ಬಂದಿ ನಾಗಶ್ರೀ ಮಾತನಾಡಿ, ಅಪರಿಚಿತ ವ್ಯಕ್ತಿಗಳೊಂದಿಗೆ ಒಡನಾಟ ಒಳ್ಳೆಯದಲ್ಲ, ಅವರಲ್ಲಿ ಅನುಮಾನಾಸ್ಪದ ನಡೆ ಕಂಡುಬಂದಲ್ಲಿ ಮೊದಲು ಶಿಕ್ಷಕರಿಗೆ ಮಾಹಿತಿ ನೀಡಬೇಕು. ಅಲ್ಲದೆ ತಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸುವುದು ಅಪಾಯಕಾರಿ ಎಂದರು. ಸಿಬ್ಬಂದಿಗಳಾದ ಆನಂದ, ರವಿಚಂದ್ರ, ಜ್ಯೋತಿ ಮೊದಲಾದವರು ಮಾಹಿತಿ ನೀಡಿದರು.
ಬಳಿಕ ಕುಂದಾಪುರ ಸಂಚಾರ ಠಾಣೆಗೂ ತೆರಳಿದ ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಬಗ್ಗೆ ತಿಳಿದುಕೊಂಡರು. ಈ ಸಂದರ್ಭದಲ್ಲಿ ಶಾಲಾ ಇಂಟರ್ ರ್ಯಾಕ್ಟ್ ಕ್ಲಬ್ ಸಂಚಾಲಕಿ ಸ್ಮಿತಾ ಡಿಸೋಜ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಉಪಸ್ಥಿತರಿದ್ದರು.