ಕೊಂಕಣಿ ಜಾನಪದ ಸಂಸ್ಕೃತಿ ಉಳಿಸುವ ಕಾರ್ಯವಾಗಬೇಕು: ವಂ.ಡೆನಿಸ್ ಡೆಸಾ
ಉಡುಪಿ, ಅ.31: ನಮ್ಮಲ್ಲಿರುವ ಕೊಂಕಣಿ ಸಂಪ್ರದಾಯ, ಜನಪದೀಯ ಸಂಸ್ಕೃತಿಗಳು ವಿಶಿಷ್ಠ ಮತ್ತು ವೈವಿಧ್ಯಮವಾಗಿದ್ದು ಅದನ್ನು ಉಳಿಸಿ ಪೋಷಿಸುವ ಅಗತ್ಯತೆ ಇದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಂ.ಡೆನಿಸ್ ಡೆಸಾ ಹೇಳಿದ್ದಾರೆ.
ಗುರುವಾರ ತೊಟ್ಟಂಚರ್ಚ್ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತದ ಯುವ ಕಥೊಲಿಕ ವಿದ್ಯಾರ್ಥಿ ಸಂಚಾಲನ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವೈಸಿಎಸ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಪಾಶ್ಚಾತೀಕರಣವಾಗುತ್ತಿರುವ ಇಂದಿನ ಸಮಾಜದಲ್ಲಿ ಯುವಕರು ಊರಿನಿಂದ ವಲಸೆ ಹೋಗುತಿದ್ದು, ನಮ್ಮ ಸಂಸ್ಕೃತಿ ಯನ್ನು ಮರೆತು ವಿದೇಶಿ ಸಂಸ್ಕೃತಿಯ ದಾಸರಾಗುತ್ತಿರುವುದು ಖೇಧಕರ ಸಂಗತಿಯಾಗಿದೆ. ನಾವು ಎಲ್ಲೇ ಇದ್ದರೂ ಕೂಡ ನಮ್ಮ ನೆಲ, ಭಾಷೆಯನ್ನು ಪ್ರೀತಿಸುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಕೊಳ್ಳಬೇಕು ಎಂದರು.
ದೀಪಾವಳಿಯ ಈ ಪರ್ವಕಾಲದಲ್ಲಿ ಕೊಂಕಣಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಾಗಾರ ಅರ್ಥಗರ್ಭಿತವಾದುದು. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಬೆಳೆಸಿ ಪೋಷಿಸುವುದರೊಂದಿಗೆ ಮುಂದಿನ ಜನಾಂಗಕ್ಕೆ ಇದರ ಅರಿವು ಇರುವಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ನಮ್ಮ ಹಳೆಯ ಕೊಂಕಣಿ ಜಾನಪದ ಸಂಸ್ಕೃತಿ ಉಳಿಸುವುದ ರೊಂದಿಗೆ ಕಲಾವಿದರನ್ನು ಕೂಡ ಗುರುತಿಸುವ ಕಾರ್ಯ ನಡೆಯಬೇಕು ಈ ಮೂಲಕ ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಸಹ ಎಂದರು.
ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರವನ್ನು ಕೊಂಕಣ್ ಮೈನಾ ಬಿರುದಾಂಕಿತರಾದ ಹೆಸರಾಂತ ಗಾಯಕ ದಿ. ವಿಲ್ಫೀ ರೆಬಿಂಬಸ್ ಅವರ ಪತ್ನಿ ಮೀನಾ ರೆಬಿಂಬಸ್ ಕಳಸಿಗೆಗೆ ಅಕ್ಕಿಯನ್ನು ತುಂಬಿಸುವ ಮೂಲಕ ಉದ್ಘಾಟಿಸಿದರು.
ತೊಟ್ಟಂ ಘಟಕದ ವೈಸಿಎಸ್ ಸದಸ್ಯರು ಕೊಂಕಣಿ ಜಾನಪದ ವಾದ್ಯ ಗುಮಟೆಯ ಮೂಲಕ ಸಂಗೀತ ಪ್ರದರ್ಶನ ನೀಡಿ ದರು. ಕ್ಯಾಥರಿನ್ ರೊಡ್ರಿಗಸ್, ಡೆಲ್ಟನ್ ಲೋಬೊ, ಜಾಸ್ಮೀನ್ ಜೆನಿಫರ್ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಧರ್ಮಪ್ರಾಂತದ ಸುಮಾರು 500ಕ್ಕೂ ಅಧಿಕ ಯುವಜನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತದ ಯುವ ನಿರ್ದೇಶಕರಾದ ವಂ.ಸ್ಟೀಫನ್ ಫೆರ್ನಾಂಡಿಸ್, ವೈಸಿಎಸ್ ಕೇಂದ್ರಿಯ ಸಚೇತಕಿ ಕವಿತಾ ಡಿಸಿಲ್ವಾ, ತೊಟ್ಟಂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ತೊಟ್ಟಂ ವೈಸಿಎಸ್ ಅಧ್ಯಕ್ಷ ಜೋಶ್ವಾ ಫೆರ್ನಾಂಡಿಸ್, ಸಚೇತಕಿ ಸುನೀತಾ ಮಾರ್ಟಿಸ್, ಪ್ರೀಶಲ್ ಡಿಮೆಲ್ಲೊ ಉಪಸ್ಥಿತರಿದ್ದರು.
ತೊಟ್ಟಂ ಘಟಕದ ಸಚೇತಕಿ ಲವೀನಾ ಆರೋಜಾ ಸ್ವಾಗತಿಸಿ, ಲೆಸ್ಲಿ ಆರೋಝಾ ಕಾರ್ಯಕ್ರಮ ಸಂಘಟಿಸಿದರು.