ದೇಶದ ಬಹು ಸಂಸ್ಕೃತಿ ನಾಶದತ್ತ: ಡಾ.ವೈ.ಎನ್.ಶೆಟ್ಟಿ ಖೇಧ
ರಂಗಭೂಮಿ ರಂಗೋತ್ಸವದಲ್ಲಿ ಜಾನಪದ ಸಿರಿ ಪ್ರಶಸ್ತಿ ಪ್ರದಾನ

ಉಡುಪಿ, ಫೆ.5: ನಮ್ಮ ದೇಶದ ಬಹು ಸಂಸ್ಕೃತಿ ನಾಶವಾಗಿ ಏಕ ಸಂಸ್ಕೃತಿಯತ್ತ ಸಾಗುತ್ತಿರುವುದು ವಿಷಾಧನೀಯ. ಹೀಗಾಗಿ ನಾಡಿನ ಜಾನಪದ ಸಂಸ್ಕೃತಿ, ಆಚರಣೆಗಳ ಬಗ್ಗೆ ದಾಖಲೀಕರಣ ಮಾಡುವ ಅಗತ್ಯವಿದೆ ಎಂದು ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಹೇಳಿದ್ದಾರೆ.
ಉಡುಪಿ ರಂಗಭೂಮಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ನಡೆಯುತ್ತಿರುವ ರಂಗಭೂಮಿ ರಂಗೋತ್ಸವದ ಮೂರನೇ ದಿನವಾದಗ ಸೋಮವಾರ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೀಡುವ 2025ನೇ ಸಾಲಿನ ‘ತಲ್ಲೂರ್ಸ್ ಜಾನಪದ ಸಿರಿ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ನಮ್ಮ ಜನಪದರ ಆರೋಗ್ಯ ಪೂರ್ಣ ಆಚರಣೆಗಳು ನಮ್ಮ ಯುವ ಪೀಳಿಗೆಗೆ ಬೇಡವಾಗಿದೆ. ಈಶಾನ್ಯ ಭಾರತದಲ್ಲಿ ಶೇ.90ರಷ್ಟು ಬುಡಕಟ್ಟು ಜನಾಂಗಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರೆತು ಏಕರೂಪದ ಸಂಸ್ಕೃತಿಯನ್ನು ಅಪ್ಪಿಕೊಂಡಿವೆ. ಈ ದುರಂತ ಇಲ್ಲಿಯೂ ನಡೆಯುವ ಅಪಾಯವಿದೆ. ಆದ್ದರಿಂದ ನಮ್ಮ ನಾಡಿನ ಜನಪದ ಕಲೆಗಳು, ಆಚರಣೆಗಳ ಬಗ್ಗೆ ದಾಖಲೀಕರಣ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮಾತನಾಡಿ, ನಮ್ಮ ಗ್ರಾಮೀಣ ಕೃಷಿ ಬದುಕು ನಮ್ಮ ಸಂಸ್ಕೃತಿಯ ನರ ನಾಡಿ ಇದ್ದಂತೆ. ಹೀಗಾಗಿ ನಮ್ಮ ಯುವ ಜನಾಂಗಕ್ಕೆ ಜಾನಪದದ ಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ರಂಗಭೂಮಿ ಉಡುಪಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ಕೇರಳ ಕಲ್ಚರಲ್ ಆಂಡ್ ಸೋಷಿಯಲ್ ಸೆಂಟರ್ ಉಡುಪಿ ಅಧ್ಯಕ್ಷ ಸುಗುಣ ಕುಮಾರ್, ಕಾರ್ಯದರ್ಶಿ ಬಿನೇಶ್ ವಿ.ಸಿ., ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಗೋಪಾಲ್ ಸಿ.ಬಂಗೇರ, ಅರುಣ್ ಕುಮಾರ್ ಹೆಗ್ಡೆ, ಪ್ರಶಾಂತ್ ಕುಮಾರ್, ಎನ್.ಎಂ. ಹೆಗ್ಡೆ, ರಂಗಭೂಮಿಯ ಪ್ರದಾನ ಕಾರ್ಯ ದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಎನ್.ಆರ್. ಬಲ್ಲಾಳ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಶಾಂತ್ ಭಂಡಾರಿ ವಂದಿಸಿದರು. ಈ ಸಂದರ್ಭದಲ್ಲಿ ರಸಿಕರ್ ಕೇರಳ ಎಂಟರ್ಟೈನ್ಮೆಂಟ್ ತಂಡದಿಂದ ಕೇರಳದ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ನಡೆಯಿತು.