ಹೆರಂಜಾಲು ಏತ ನೀರಾವರಿ ಯೋಜನೆ ಸಭೆ: ತಂಡಗಳ ಮಧ್ಯೆ ತಳ್ಳಾಟ

ಬೈಂದೂರು: ಕಂಬದಕೋಣೆ ಗ್ರಾಪಂ ವ್ಯಾಪ್ತಿಯ ಹೇರಂಜಾಲು ಏತ ನೀರಾವರಿ ಯೋಜನೆ ವೈಫಲ್ಯ, ಸ್ಥಳೀಯ ರೈತರಿಗೆ ಆಗುತ್ತಿರುವ ತೊಂದರೆ ಕುರಿತ ಮಾಹಿತಿ ಸಭೆಯನ್ನು ಮಂಗಳವಾರ ಹೇರಂಜಾಲು ಶ್ರೀದುರ್ಗಾ ಗಣೇಶೋತ್ಸವ ವೇದಿಕೆ ಯಲ್ಲಿ ಆಯೋಜಿಸಲಾಗಿತ್ತು.
ಒಂದು ತಂಡ ಈ ಯೋಜನೆ ಅವೈಜ್ಞಾನಿಕ ಎಂಬುದಾಗಿ ಆರೋಪಿಸಿದರೆ, ಇನ್ನೊಂದು ತಂಡ ಇದಕ್ಕೆ ವಿರೋಧ ವ್ಯಕ್ತಪಡಿ ಸಿತು. ಇದೇ ವೇಳೆ ರೈತ ಮುಖಂಡರ ಕೈಯಲ್ಲಿದ್ದ ಮೈಕ್ ಕಿತ್ತು ಕೊಂಡ ಹಿನ್ನೆಲೆಯಲ್ಲಿ ಎರಡು ತಂಡಗಳ ನಡುವೆ ತಳ್ಳಾಟ, ನೂಕಾಟ ನಡೆದು ಒಂದಿಷ್ಟು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಸಭೆ ಮುಂದುವರಿಯುವಂತೆ ಮಾಡಿದರು.
ಏತ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದ್ದು ಇದರಿಂದ ಸ್ಥಳೀಯ ರೈತರಿಗೆ ತೊಂದರೆಯಾಗುತ್ತಿದೆ. ಈ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಷ್ಟು ದೊಡ್ಡ ಯೋಜನೆ ಆಗುತ್ತಿದ್ದರೂ ಕೂಡಾ ಎಲ್ಲಿಯೂ ಕೂಡಾ ಒಂದು ಬೋರ್ಡ್ ಹಾಕಿಲ್ಲ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ರೈತ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ದೂರಿದರು.
ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಸುಮಾರು ೭೦ ಕೋಟಿ ರೂ. ಅನುದಾನದ ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು. ಸರಕಾರದ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಗ್ರಾಮಸ್ಥರು ತಮ್ಮ ಹಕ್ಕು ಕೇಳುತ್ತಾರೆ, ಅಧಿಕಾರಿಗಳು ವಾದ ಮಾಡದೆ ಅವರಿಗೆ ಅನುಕೂಲವಾಗುವಂತೆ, ಸಮಸ್ಯೆಯಾಗದಂತೆ ನೋಡಿ ಕೊಳ್ಳಬೇಕು ಎಂದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪುನೀತ್ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಸಭೆಯಲ್ಲಿ ಕಂಬದಕೋಣೆ ಗ್ರಾಪಂ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಕಾಲ್ತೋಡು ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಅಭಿವೃದ್ಧಿ ಅಧಿಕಾರಿಗಳು, ರೈತ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.