ವಿಶ್ವಕರ್ಮ ಯೋಜನೆ| ತರಬೇತಿ ಪಡೆದವರಿಗೆ ಶೀಘ್ರ ಕಿಟ್ ವಿತರಣೆ: ಸಂಸದ ಕೋಟ

ಉಡುಪಿ, ಫೆ.5: ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ 4,942 ಮಂದಿ ಫಲಾನುಭವಿಗಳಿಗೆ ವಿವಿಧ ತರಬೇತಿ ಸಂಸ್ಥೆಗಳಿಂದ ತರಬೇತಿ ಒದಗಿಸಲಾಗುತ್ತಿದೆ. ಇವರಲ್ಲಿ ಸುಮಾರು 2,500 ಕ್ಕೂ ಅಧಿಕ ಮಂದಿಗೆ ತಲಾ 1 ಲಕ್ಷದಂತೆ ಒಟ್ಟು ಸುಮಾರು 25 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕಿಂಗ್ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ಇಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದ ಲಾಗಿನ್ಗಳನ್ನು ಜಿಲ್ಲಾಧಿಕಾರಿ ಅವರ ಪರಿಶೀಲನೆಗೆ ಒದಗಿಸುವಂತೆ, ಅರ್ಜಿ ಸಲ್ಲಿಸಿದ ಟೈಲರಿಂಗ್, ಗಾರೆ ಕೆಲಸ ಮತ್ತು ಮರಗೆಲಸದ ಫಲಾನುಭವಿಗಳಿಗೆ ಮಂಜೂರಾತಿ ನೀಡಬೇಕೆಂದು ಸಂಸದ ಕೋಟ ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದರು.
18 ವಿವಿಧ ಸಾಂಪ್ರಾದಾಯಿಕ ಕುಲಕಸುಬುಗಳ ವೃತ್ತಿನಿರತರಿಗೆ ಉತ್ತೇಜನ ನೀಡಿ, ಉಚಿತವಾಗಿ ತರಬೇತಿ ಒದಗಿಸಿ ಸಾಲ ಸೌಲಭ್ಯ ಒದಗಿಸುವ ಯೋಜನೆಯಾದ ವಿಶ್ವಕರ್ಮ ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ಮೊತ್ತದ ಭದ್ರತೆ ಒದಗಿಸಿದ್ದು, ವಿವಿಧ ಸಾಂಪ್ರಾದಾಯಿಕ ಕುಲಕಸುಬುಗಳ ವೃತ್ತಿನಿರತರಿಗೆ ಉತ್ತಮ ಗುಣಮಟ್ಟದ 15,000 ರೂ. ವೆಚ್ಚದ ಕಿಟ್ಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದರು.
ಕುಶಲಕರ್ಮಿಗಳಿಗೆ ನೀಡುವ ಕಿಟ್ಗಳ ಗುಣಮಟ್ಟ ಮತ್ತು ಫಲಾನುಭವಿ ಗಳಿಗೆ ಒದಗಿಸುವ ಸಲಕರಣೆಯ ಬಗ್ಗೆ ಅಂತಿಮ ತೀರ್ಮಾನ ಕೇಂದ್ರ ಸರ್ಕಾರ ಕೈಗೊಂಡಿದ್ದು, ಸದ್ಯದಲ್ಲಿಯೇ ಸಾಮಾಗ್ರಿಗಳ ಟೆಂಡರ್ ಅವಧಿ ಕೊನೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಿಟ್ಗಳ ವಿತರಣೆಯನ್ನು ಕಾಯದೇ ತರಬೇತಿ ಮತ್ತು ಸಾಲ ಸೌಲಭ್ಯಕ್ಕೆ ವೇಗ ಕೊಡಲು ಅಧಿಕಾರಿಗಳಿಗೆ ಕೋಟ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ ರಾವ್, ಕೈಗಾರಿಕಾ ವಿಸ್ತರಣಾಧಿಕಾರಿ ಸೀತಾರಾಮ ಶೆಟ್ಟಿ, ಕೈಗಾರಿಕಾ ಜಂಟಿ ನಿರ್ದೇಶಕ ನಾಗರಾಜ ನಾಯ್ಕ್, ವಿಶ್ವಕರ್ಮ ಯೋಜನೆಯ ನೋಡಲ್ ಅಧಿಕಾರಿ ಅರುಣ್, ವಿಶ್ವಕರ್ಮ ಯೋಜನೆಯ ತಾಂತ್ರಿಕ ಸಹಾಯಕಿ ಸಂಧ್ಯಾ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಉಪಸ್ಥಿತರಿದ್ದರು.