ಇಂದ್ರಾಳಿ ರೈಲ್ವೆ ಮೇಲ್ಸೆತುವೆ, ವಿವಿಧ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ
ಮತ್ತೆ ಹೋರಾಟದ ಆರಂಭಕ್ಕೆ ಫೆ.8ರಂದು ಸಮಾಲೋಚನಾ ಸಭೆ

ಉಡುಪಿ, ಫೆ.5: ರಾ.ಹೆದ್ದಾರಿ 169ಎಯಲ್ಲಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಾಗುತ್ತಿರುವ ವಿಳಂಬ, ಪರ್ಕಳ ಹಾಗೂ ಸಂತೆಕಟ್ಟೆ ಮತ್ತು ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಮಗಾರಿಯ ಅವ್ಯವಸ್ಥೆಗಳ ವಿರುದ್ಧ ಮತ್ತೊಮ್ಮೆ ಬೃಹತ್ ಹೋರಾಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಉಡುಪಿ ಆಸುಪಾಸಿನ ರಸ್ತೆ ಕಾಮಗಾರಿಯ ವಿರುದ್ಧ ಹೋರಾಟಕ್ಕೆ ರೂಪುರೇಷೆಗಳನ್ನು ಹಾಕಿಕೊಳ್ಳುತ್ತಿದೆ.
ಈ ನಿಟ್ಟಿನಲ್ಲಿ ಇದೇ ಫೆ.8ರ ಶನಿವಾರ ಸಂಜೆ 4:00ಗಂಟೆಗೆ ಕುಂಜಿಬೆಟ್ಟಿನಲ್ಲಿರುವ ಶಾರದಾ ಕಲ್ಯಾಣ ಮಂಟಪ ಆವರಣದ ಜ್ಞಾನಮಂದಿರ ದಲ್ಲಿ ಸಮಾಲೋಚನಾ ಸಭೆಯೊಂದನ್ನು ಕರೆಯಲಾಗಿದೆ ಎಂದು ಹಿಂದೆ ಇಂದ್ರಾಳಿ ರೈಲ್ವೆ ಸೇತುವೆ ಹೋರಾಟದ ನೇತೃತ್ವ ವಹಿಸಿದ್ದ ಅಮೃತ ಶೆಣೈ ಅವರು ಇಂದು ಪ್ರೆಸ್ ಕ್ಲಬ್ನಲ್ಲಿ ಕರೆದ ಪತಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಿತಿಯ ನೇತೃತ್ವದಲ್ಲಿ ಇಂದ್ರಾಳಿ ಸೇತುವೆ ಕಾಮಗಾರಿಯ ವಿಳಂಬ ಹಾಗೂ ಅವ್ಯವಸ್ಥೆಯನ್ನು ವಿರೋಧಿಸಿ 2024ರ ಅ.29ರಂದು ಇಂದ್ರಾಳಿಯಲ್ಲಿ ಸಾರ್ವಜನಿಕರ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿ 2025ರ ಜನವರಿ 31ರೊಳಗೆ ಕಾಮಗಾರಿಯನ್ನು ಮುಗಿಸಿ ಚತುಷ್ಪಥ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕೆಂಬ ಗಡುವು ನೀಡ ಲಾಗಿತ್ತು. ಆದರೆ ಗಡವು ಮುಗಿದು ವಾರ ಕಳೆದರೂ ಕಾಮಗಾರಿ ಇನ್ನೂ ಮುಗಿಯದ ಕಾರಣ ಅಂದು ತಿಳಿಸಿದಂತೆ ನಾವು ಮತ್ತೆ ಹೋರಾಟಕ್ಕೆ ಸಿದ್ದ ರಾಗಿದ್ದೇವೆ ಎಂದು ಅಮೃತ ಶೆಣೈ ತಿಳಿಸಿದರು.
ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಸದ್ಯಕ್ಕಂತೂ ಅದು ಪೂರ್ಣಗೊಳ್ಳುವ ಯಾವುದೇ ಲಕ್ಷಣವನ್ನು ತೋರಿಸುತ್ತಿಲ್ಲ. ಹೀಗಾಗಿ ಮತ್ತೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಉಡುಪಿ ಜನತೆಯೂ ಈ ಬಗ್ಗೆ ನಮ್ಮ ಮೇಲೆ ಒತ್ತಡ ಹೇರತೊಡಗಿದ್ದಾರೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಶನಿವಾರ ಸಮಾಲೋಚನಾ ಸಭೆಯನ್ನು ಕರೆದಿದ್ದೇವೆ ಎಂದರು.
ಇದರೊಂದಿಗೆ ಪರ್ಕಳ, ಸಂತೆಕಟ್ಟೆ, ಆದಿಉಡುಪಿ, ಅಂಬಲಪಾಡಿಗಳಲ್ಲೂ ನಡೆದಿರುವ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ವಿರುದ್ಧವೂ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಹೋರಾಟ ಸಮಿತಿಯ ಹೆಸರನ್ನು ಉಡುಪಿ ನಗರ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಎಂದು ಬದಲಾಯಿಸಲು ನಿರ್ಣಯಿಸಿದ್ದೇವೆ. ಆದ್ದರಿಂದ ಈ ಸಭೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆಗಳನ್ನು ನೀಡಲು ಎಲ್ಲರನ್ನೂ ನಾವು ಆಹ್ವಾನಿಸುತಿದ್ದೇವೆ ಎಂದು ಶೆಣೈ ತಿಳಿಸಿದರು.
ಉಡುಪಿ-ಮಣಿಪಾಲ ರಸ್ತೆಯಲ್ಲಿರುವ ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಕಳೆದ ಎಂಟು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಈ ನಡುವೆ ಅಲ್ಲಿ ನೂರಾರು ಅಪಘಾತಗಳಾಗಿ ಹತ್ತಾರು ಮಂದಿ ಜೀವ ಕಳೆದುಕೊಂಡರೆ ನೂರಾರು ಮಂದಿ ಗಾಯಾಳು ಗಳಾಗಿ ಚಿಕಿತ್ಸೆ ಪಡೆಯುವಂತಾಗಿದೆ. ಕಾಮಗಾರಿ ಯಾಕೆ ವಿಳಂಬ ವಾಗುತ್ತಿದೆ ಎಂಬ ಕುರಿತಂತೆ ಹಿಂದಿನ ಸಂಸದರಾದ ಶೋಭಾ ಕರಂದ್ಲಾಜೆ ಅವರಾಗಲೀ, ಈಗಿನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಾಗಲೀ ಯಾವುದೇ ಮಾಹಿತಿ ಯನ್ನು ಸಾರ್ವಜನಿಕರಿಗೆ ನೀಡದೇ ದಾರಿ ತಪ್ಪಿಸುವ ಹೇಳಿಕೆ ನೀಡುತಿದ್ದಾರೆ ಎಂದು ನಗರಸಭಾ ವಿಪಕ್ಷ ನಾಯಕ ರಮೇಶ ಕಾಂಚನ್ ತಿಳಿಸಿದರು.
ಕೇಂದ್ರ ಸರಕಾರದ ಈ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕಿದ್ದ ಸಂಸದ ಕೋಟ ಅವರು ವಿಳಂಬದ ವಿರುದ್ಧ ಧರಣಿ ನಡೆಸುವುದಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರದೇ ಪಕ್ಷ ಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಆಡಳಿತನಡೆಸುತಿದ್ದೆ. ಅದನ್ನು ಕೇಳುವುದು ಬಿಟ್ಟು ಕೋಟ ನೀಡಿರುವ ಹೇಳಿಕೆ ಲಜ್ಜಾಸ್ಪದ. ಹಾಗಿದ್ದರೆ ಕೋಟ ನಾವು ನಡೆಸುವ ಹೋರಾಟದೊಂದಿಗೆ ಕೈಜೋಡಿಸಲಿ ಎಂದು ಕಾಂಚನ್ ಸವಾಲೆಸೆದರು.
ಸ್ಥಳೀಯ ಶಾಸಕರು ಹಾಗೂ ಸಂಸದರು ನಿರಂತರವಾಗಿ ಗಡುವು ನೀಡುತ್ತಾ ಬರುತ್ತಿರುವುದರಿಂದ ಕಾಮಗಾರಿಯ ಕುರಿ ತಂತೆ ಜಿಲ್ಲೆಯ ಜನತೆ ವಿಶ್ವಾಸವನ್ನೇ ಕಳೆದು ಕೊಂಡಿದ್ದಾರೆ. ಹೀಗಾಗಿ ವಿಪಕ್ಷವಾಗಿ ನಾವು ಇದನ್ನು ಪ್ರಶ್ನಿಸಬೇಕಾಗಿದೆ ಎಂದು ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮ್ಮದ್, ಕೀರ್ತಿ ಶೆಟ್ಟಿ ಅಂಬಲಪಾಡಿ, ಜ್ಯೋತಿ ಹೆಬ್ಬಾರ್, ಸಂತೋಷ್ ಬೈರಂಪಳ್ಳಿ, ಅಝೀಝ್ ಅಬ್ದುಲ್, ಗಣೇಶರಾಜ್ ಸರಳೇಬೆಟ್ಟು, ಮಹಾಬಲ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.