ಮಣಿಪಾಲ: ಬಿವಿಟಿಯಲ್ಲಿ ತಾರಸಿ ತೋಟ ಮಾಹಿತಿ ಶಿಬಿರ

ಮಣಿಪಾಲ: ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ, ಉಡುಪಿ ರೋಬೋಸಾಫ್ಟ್ ಟೆಕ್ನಾಲಜೀಸ್ನ ಸಹಯೋಗದಲ್ಲಿ ಒಂದು ದಿನದ ತಾರಸಿ ತೋಟ ಮತ್ತು ಕಿಚನ್ ಗಾರ್ಡನ್ ಮಾಹಿತಿ ಶಿಬಿರವನ್ನು ಮಂಗಳವಾರ ಬಿವಿಟಿ ಸಭಾಂಗಣದಲ್ಲಿ ಆಯೋಜಿಸಿತು.
ಕಾರ್ಯಕ್ರಮವನ್ನು ರೋಬೋಸಾಫ್ಟ್ ಟೆಕ್ನಾಲಾಜಿಯ ಶೃತಿ ಡಿಸೋಜಾ ತರಕಾರಿ ಬೀಜದ ಪ್ಯಾಕೆಟನ್ನು ಅನಾವರಣ ಗೊಳಿಸುವ ಮೂಲಕ ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತೋಟಗಾರಿಕೆಯಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಿರುತ್ತದೆ ಎಂದರು.
ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ ಪೈ ಮಾತನಾಡಿ, ತರಕಾರಿ ಗಳನ್ನು ಹೊರಗಿನಿಂದ ಖರೀದಿಸುವ ಬದಲು ನಾವೇ ಖುದ್ದಾಗಿ ಬೆಳೆದು ಬಳಸುವುದು ಆರೋಗ್ಯಕರ. ಇದಕ್ಕಾಗಿ ಸಂಸ್ಥೆಯ ಸ್ಥಾಪಕರಾದ ಟಿ.ಎ.ಪೈ ಅವರು ತರಕಾರಿ ಬೀಜಗಳನ್ನು ಸಾರ್ವಜನಿಕರಿಗೆ ವಿತರಿಸುವ ಯೋಜನೆಯನ್ನು 70ರ ದಶಕದಲ್ಲಿ ಪ್ರಾರಂಭಿಸಿದರು ಎಂದರು.
ಇಂದಿನ ಯುವಕ-ಯುವತಿಯರು ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸುತ್ತಿರುವುದರಿಂದ ಅವರ ಪೋಷಕರಿಗೆ ವೃದ್ಧಾಪ್ಯದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಮುಂಬರುವ ದಿನಗಲ್ಲಿ ಹಿರಿಯ ನಾಗರಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಬಿವಿಟಿಯಲ್ಲಿ ಆಯೋಜಿಸುವ ಯೋಜನೆಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಚೈತನ್ಯ ದೃಶ್ಯ ಮಾಧ್ಯಮಗಳ ಮೂಲಕ ಮನೆಯಂಗಳದಲ್ಲಿ ಬೆಳಸಬಹುದಾದ ತರಕಾರಿ ಬೆಳೆಗಳ ಮಾಹಿತಿ ನೀಡಿದರು.
ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಸುಮಾರು 80 ಮಂದಿ ಆಸಕ್ತರು ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.