ಛತ್ತೀಸ್‌ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಬಂಧನ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಖಂಡನೆ

ಉಡುಪಿ: ಛತ್ತೀಸ್‌ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಸುಳ್ಳು ಆರೋಪದ ಮೇಲೆ ಬಂಧಿಸಿರುವ ಅಲ್ಲಿನ ಪೊಲೀಸರ ಕ್ರಮವನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಖಂಡಿಸಿದ್ದು ಈ ಕೂಡಲೇ ಬಂಧಿತ ಧರ್ಮ ಭಗಿನಿಯರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.
ಛತ್ತೀಸ್‌ಗಢದಲ್ಲಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ ಆಫ್ ಅಸ್ಸಿಸಿಯ ಸದಸ್ಯರಾದ ತಲಶ್ಶೇರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ ಮೇರಿ ಎಂಬ ಇಬ್ಬರು ಮಲಯಾಳಿ ಕ್ರೈಸ್ತ ಸನ್ಯಾಸಿನಿಯರನ್ನು ಕೆಲವೊಂದು ಸಂಘಟನೆಗಳ ಸುಳ್ಳು ಆರೋಪಗಳ ಮೇಲೆ ಮಾನವ ಕಳ್ಳ ಸಾಗಣೆ ಮತ್ತು ಧಾರ್ಮಿಕ ಮತಾಂತರದ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಬಂಧಿತ ಕ್ರೈಸ್ತ ಸನ್ಯಾಸಿನಿಯರು ಮಹಿಳೆಯರನ್ನು ಅವರ ಪೋಷಕರಿಂದ ಒಪ್ಪಿಗೆ ಪತ್ರಗಳನ್ನು ಪಡೆದು ಆಗ್ರಾದ ಕಾನ್ವೆಂಟ್ ಗಳಲ್ಲಿ ಮನೆಕೆಲಸಕ್ಕಾಗಿ ಕರೆದೊಯ್ಯುತ್ತಿದ್ದರು.
ಪತ್ರಿಕಾ ವರದಿಗಳ ಪ್ರಕಾರ ಬಂಧಿತ ಸನ್ಯಾಸಿನಿಯರನ್ನು ಭೇಟಿ ಮಾಡಲು ಯಾವುದೇ ಚರ್ಚ್ ಪ್ರತಿನಿಧಿ ಗಳಿಗೆ ಅವಕಾಶ ನೀಡಲಾಗಿಲ್ಲ. ಅಲ್ಲದೆ ತಮ್ಮ ಹೇಳಿಕೆಗಳನ್ನು ಬದಲಾಯಿಸುವಂತೆ ಯುವತಿಯರ ಮೇಲೆ ಒತ್ತಡ ಹೇರಲಾ ಗುತ್ತಿದೆ ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ವಿವಿಧೆಡೆ ಇತ್ತೀಚಿನ ವರ್ಷಗಳಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಿರಂತರ ದಾಳಿಗಳು ನಡೆಯು ತ್ತಿದ್ದು, ವಿವಿಧ ಸಂಘಟನೆಗಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳ ಮೇಲೆ ಸುಳ್ಳು ಆರೋಪ ಹೊರಿಸುವುದು ಸಾಮಾನ್ಯವಾಗಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳ ಬಗ್ಗೆ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ರಕ್ಷಣೆ ಒದಗಿಸ ಬೇಕಾಗಿದೆ. ದಶಕಗಳಿಂದ ದೇಶದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡಿರುವ ಧರ್ಮಭಗಿನಿಯರನ್ನು ನಡೆಸಿಕೊಂಡಿರುವ ರೀತಿ ನಾಗರಿಕ ಸಮಾಜ ಒಪ್ಪುವಂತ ದಲ್ಲ ಎಂದು ಹೇಳಿಕೆ ಪ್ರತಿಪಾದಿಸಿದೆ.
ಈ ಬಗ್ಗೆ ಛತ್ತೀಸ್‌ಗಢ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಬಂಧನದಲ್ಲಿರುವ ಧರ್ಮಭಗಿನಿಯರು ಹಾಗೂ ಮೂವರು ಯುವತಿಯರನ್ನು ತಕ್ಷಣ ಮತ್ತು ಬಿಡುಗಡೆ ಮಾಡಬೇಕು. ಸುಳ್ಳು ಮತ್ತು ದ್ವೇಷಪೂರಿತ ದೂರು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು. ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಪೊಲೀಸರ ವೈಫಲ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ನೈತಿಕ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.







