ಉಡುಪಿ: ರಾತ್ರಿ 10 ಗಂಟೆಯ ಬಳಿಕ ಪಟಾಕಿ ಬಳಕೆಗೆ ನಿಷೇಧ

ಉಡುಪಿ, ಅ.18: ದೀಪಾವಳಿ ಸಂಭ್ರಮ ಪ್ರಾರಂಭಗೊಂಡಿದ್ದು, ಸಿಹಿತಿಂಡಿಗಳೊಂದಿಗೆ ಬಗೆಬಗೆಯ ವೈವಿಧ್ಯಮಯ ಪಟಾಕಿಗಳನ್ನು ಸಿಡಿಸಲು ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರೂ ಸಿದ್ಧತೆಗಳನ್ನು ನಡೆಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಜಿಲ್ಲಾ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದು ಸರ್ವೆ ಸಾಮಾನ್ಯವಾದರೂ ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಉಂಟಾಗಿ ಉತ್ತಮ ವಾತವರಣವಿರದೇ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣ ಎಲ್ಲಡೆ ಕಂಡುಬರುತ್ತದೆ. ಇದು ಚಿಕ್ಕ ಮಕ್ಕಳು, ವಯಸ್ಸಾದವರ ಹಾಗೂ ಪ್ರಾಣಿಪಕ್ಷಿಗಳ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ದೇಶದ ಸರ್ವೋಚ್ಛ ನ್ಯಾಯಾಲಯವು ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು, ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಸಿಎಸ್‌ಐಆರ್-ನೀರಿ ಇವರು ಶಿಫಾರಸ್ಸು ಮಾಡಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸುವಂತೆ ಅದು ಸೂಚಿಸಿದೆ. ಹಸಿರು ಪಟಾಕಿಯ ಮೇಲೆ ಹಸಿರು ಬಣ್ಣದಲ್ಲಿ ಸಿಎಸ್‌ಐಆರ್- ನೀರಿ ಚಿಹ್ನೆ ಮತ್ತು ಕ್ಯೂಆರ್ ಕೋಡ್‌ಗಳನ್ನು ಮುದ್ರಿಸಲಾಗುತ್ತದೆ. ಅಂತಹ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಾರ್ವಜನಿಕರು ಬಳಸಲು/ಉಪಯೋಗಿಸಲು ಅವಕಾಶವಿರುತ್ತದೆ.
ಆದ್ದರಿಂದ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಿ, ಸರ್ವೋಚ್ಛ ನ್ಯಾಯಾಲಯವು ನಿಗದಿ ಪಡಿಸಿರುವ ಸಮಯದಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಸಿಡಿಸುವಂತೆ ಕ. ರಾ.ಮಾ.ನಿ.ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಪಟಾಕಿ: ಸಾಕು ಪ್ರಾಣಿ/ಜಾನುವಾರುಗಳ ಬಗ್ಗೆ ಜಾಗೃತಿ ವಹಿಸಿ
ದೀಪಾವಳಿ ಮತ್ತಿತರ ಹಬ್ಬದ ದಿನಗಳಲ್ಲಿ ಸಾರ್ವಜನಿಕ ರು ಸಿಡಿಸುವ ಪಟಾಕಿ ಸದ್ದಿಗೆ ಸಾಕು ಪ್ರಾಣಿ/ಜಾನುವಾರುಗಳಲ್ಲಿ ಆತಂಕ/ಭೀತಿ ಸೃಷ್ಟಿಯಾಗಿ ಜಾನುವಾರುಗಳು ಹಲವು ದಿನಗಳ ಕಾಲ ಆಹಾರ ತ್ಯಜಿಸುವ ಹಾಗೂ ತಮ್ಮ ಮೂಲ ಸ್ಥಾನದಿಂದ ಪಲಾಯನ ಮಾಡುವ ಸಂಭವವಿರುತ್ತದೆ.
ಆದ್ದರಿಂದ ಪ್ರಾಣಿಗಳನ್ನು ಕರ್ಕಶ ಶಬ್ದಗಳಿಂದ ಮುಕ್ತಗೊಳಿಸಲು ಸುರಕ್ಷಿತ ಕ್ರಮಕೈಗೊಂಡು, ಸಾರ್ವಜನಿಕರು ಈ ಬಗ್ಗೆ ಗಮನಹರಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪರಿಸರ ಸ್ನೇಹಿ ಸಿಡಿಮದ್ದುಗಳನ್ನು (ಗ್ರೀನ್ ಕ್ರಾಕರ್ಸ್) ಮಾತ್ರ ಸಿಡಿಸುವಂತೆ ಪ್ರಾಣಿ ದಯಾ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







