ಉಡುಪಿ| ಆನ್‌ಲೈನ್ ವಂಚನೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಉಡುಪಿ, ಸೆ.4: ಉಡುಪಿ ಸೆನ್ ಪೊಲೀಸರು ಎರಡು ಪ್ರತ್ಯೇಕ ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಿ, 6ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕಾಪು ತಾಲೂಕಿನ ಶಂಕರಪುರದ ಜೊಸ್ಸಿ ರವೀಂದ್ರ ಡಿಕ್ರೂಸ್(54), ಎಂಬವರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ ಫೆಬ್ರವರಿ ತಿಂಗಳಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದು, ಅದರಂತೆ ಜೊಸ್ಸಿ ಹಂತ ಹಂತವಾಗಿ ಒಟ್ಟು 75,00,000ರೂ. ಹಣವನ್ನು ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿದ್ದರು. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಸೆನ್ ಪೊಲೀಸರು, ಸುರತ್ಕಲ್ ಕೋಡಿಕೆರೆಯ ಮೊಹಮದ್ ಕೈಸ್(20), ಹೆಜಮಾಡಿ ಕನ್ನಂಗಾರಿನ ಅಹಮದ್ ಅನ್ವೀಜ್ (20), ಬಂಟ್ವಾಳ ಜೋಡುಮಾರ್ಗದ ಸಫ್ವಾನ್(30), ತಾಸೀರ್(31) ಎಂಬವರನ್ನು ಬಂಧಿಸಿ, ಮೊಬೈಲ್ ಫೋನ್‌ಗಳನ್ನು ಹಾಗೂ 4,00,000ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರೆಸಲಾಗಿದೆ.
ಎರಡನೇ ಪ್ರಕರಣ: ಉಡುಪಿ ಅಂಬಾಗಿಲು ಪೆರಪಂಳ್ಳಿಯ ತೀರ್ಥರಾಜ ಶೆಣೈ(51) ಎಂಬವರನ್ನು ಅಪರಿಚಿತರು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶ ನೀಡುವುದಾಗಿ ನಂಬಿಸಿ, ಡಿ.19ರಿಂದ ಜ.7ರವರೆಗೆ ಒಟ್ಟು 44,00,000ರೂ. ಹಣವನ್ನು ಬ್ಯಾಂಕ್ ಖಾತೆಯ ಮೂಲಕ ಪಡೆದು ವಂಚಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಸೆನ್ ಪೊಲೀಸರು ಮೈಸೂರು ಹುಣಸೂರಿನ ಶೋಯಬ್ ಅಹಮದ್(28) ಮತ್ತು ಮುದ್ದಾಸಿರ್ ಅಹಮದ್(40) ಎಂಬವರನ್ನು ಬಂಧಿಸಿ, 2,00,000ರೂ. ಹಣ ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲೂ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಸೆನ್ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಎಎಸ್ಸೈ ಉಮೇಶ್ ಜೋಗಿ, ಸಿಬ್ಬಂದಿ, ಪ್ರವೀಣ್ ಕುಮಾರ್, ಪ್ರವೀಣ ಶೆಟ್ಟಿಗಾರ್, ಧರ್ಮಪ್ಪ, ರಾಜೇಶ್, ವೆಂಕಟೇಶ್ ಜಂತ್ರ, ರಾಘವೇಂದ್ರ, ಪವನ್, ದಿಕ್ಷೀತ್, ನಿಲೇಶ್ ಅವರನ್ನು ಒಳಗೊಂಡ ವಿಶೇಷ ತಂಡ ನಡೆಸಿದೆ.







