ಉಡುಪಿ| ಅಕ್ರಮ ಪಟಾಕಿ ದಾಸ್ತಾನಿಗೆ ಪೊಲೀಸ್ ದಾಳಿ: ಐವರ ಬಂಧನ; ಕೋಟ್ಯಂತರ ರೂ. ಮೌಲ್ಯದ ಸೊತ್ತು ವಶ

ಪ್ರಶಾಂತ್, ಶಿವಾನಂದ್, ಸತ್ಯೇಂದ್ರ, ಶ್ರೀಕಾಂತ್, ರಮಾನಂದ್
ಉಡುಪಿ, ಅ.16: ಉಡುಪಿಯ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಕ್ರಮ ಹಾಗೂ ಅಪಾಯಕಾರಿ ರೀತಿಯಲ್ಲಿ ದಾಸ್ತಾನು ಇರಿಸಲಾದ ಕೋಟ್ಯಂತರ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿ ಕೊಂಡು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಟ ಪೊಲಿಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮನೆಯ ಶೆಡ್ನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ದಾಸ್ತಾನು ಇರಿಸಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಕೆ.ಪ್ರಶಾಂತ ಜೋಗಿ (44) ಎಂಬಾತನನ್ನು ಬಂಧಿಸಿ, ಸುಮಾರು 1,61,372ರೂ. ಮೌಲ್ಯದ 332 ಬಾಕ್ಸ್ ವಿವಿಧ ಬ್ರಾಂಡ್ಗಳ ಪಟಾಕಿಗಳನ್ನು ವಶಪಡಿಸಿಕೊಂಡರು.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಆರೂರು ಗ್ರಾಮದ ಕುಂಜಾಲ್ ಎಂಬಲ್ಲಿರುವ ಮನೆಯ ಪಕ್ಕದ ಶ್ಯಾಮಿಯಾನ ಗೋಡಾನ್ನಲ್ಲಿ ಅಕ್ರಮವಾಗಿ ಇರಿಸಲಾದ ಸುಮಾರು 35,000ರೂ. ಮೌಲ್ಯ 16 ಬಾಕ್ಸ್ ವಿವಿಧ ಬ್ರಾಂಡ್ಗಳ ಪಟಾಕಿ ಸ್ಪೋಟಕಗಳನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದು, ಈ ಸಂಬಂಧ ಕುಂಜಾಲಿನ ಶಿವಾನಂದ ರಾವ್(50), ಎಂಬಾತನನ್ನು ಬಂಧಿಸಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಯಾರು ಗ್ರಾಮದ ದೇಂದಬೆಟ್ಟುವಿನ ಸತ್ಯೇಂದ್ರ ನಾಯಕ್(70), ಶ್ರೀಕಾಂತ್ ನಾಯಕ್ (37) ಹಾಗೂ ರಮಾನಂದ ನಾಯಕ್(48) ಎಂಬವರು ತಮ್ಮ ಹಳೆ ವಾಸದ ಮನೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ದಾಸ್ತಾನು ಇರಿಸಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ 1 ಕೋಟಿ ರೂ. ಅಧಿಕ ಮೌಲ್ಯದ ವಿವಿಧ ಬ್ರಾಂಡ್ಗಳ ಪಟಾಕಿಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







