‘1993ರ ಪರಿಸ್ಥಿತಿ ಮರುಕಳಿಸಬಹುದು’: ಭಟ್ಕಳದಲ್ಲಿ ಬಿಜೆಪಿ ನಾಯಕ ಗೋವಿಂದ ನಾಯಕ್ ವಿವಾದಾತ್ಮಕ ಹೇಳಿಕೆ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ವಿವಾದಾತ್ಮಕ ‘ಮುರಿನ ಕಟ್ಟೆ’ ರಚನೆ ವಿಚಾರವಾಗಿ ಭಟ್ಕಳದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪೊಲೀಸ್ ಭದ್ರತೆಯಲ್ಲಿ ಪುನರ್ನಿರ್ಮಾಣ ಕಾರ್ಯ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೆ ಪ್ರತಿಭಟನೆಗಳು ಶುರುವಾಗಿವೆ. ಈ ನಡುವೆಯೇ, ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಬಿಜೆಪಿ ನಾಯಕ ಗೋವಿಂದ ನಾಯಕ್ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.
ರವಿವಾರ ಸಂಜೆ ಕೆಲ ಯುವಕರು ವಿವಾದಿತ ಸ್ಥಳದ ಬಳಿ ಸೇರಿ ಪುನರ್ನಿರ್ಮಾಣ ಮಾಡಿದ ರಚನೆಯನ್ನು ಕೆಡವಲು ಯತ್ನಿಸಿದ್ದಾರೆ ಎಂದು ಎನ್ನಲಾಗಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈ ಮೀರದಂತೆ ತಡೆಯಲು ಪೊಲೀಸರು ಹೆಚ್ಚುವರಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡರು
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಎನ್. ದೀಪನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮುಖಂಡರು, ನಿವಾಸಿಗಳು ಮತ್ತು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆವರೆಗೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು. ಈ ವಿಷಯದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವ ಮೊದಲು ಜಿಲ್ಲಾಧಿಕಾರಿ ಕಾರವಾರದಿಂದ ಆಗಮಿಸಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರತಿಭಟನಾಕಾರರಿಗೆ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ನಡುವೆ, ಭಟ್ಕಳದ ಮಾಜಿ ಶಾಸಕ ಸುನಿಲ್ ನಾಯಕ್ ಅವರ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಗೋವಿಂದ ನಾಯಕ್, ಸ್ಥಳೀಯ ಮುಸ್ಲಿಂ ಸಂಘಟನೆ ಮಜ್ಲಿಸ್-ಎ-ಇಸ್ಲಾ ವ ತಂಝೀಮ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವ ಮುಸ್ಲಿಂ ಯುವಕರಿಗೆ ಸಂಘಟನೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ ಅವರು, “ನಾವು 1993ರಿಂದ ಅವರ ವಿರುದ್ಧ ಹೋರಾಡುತ್ತಿದ್ದೇವೆ. ಮುಂದೆಯೂ ಹೋರಾಟ ಮುಂದುವರಿಸುತ್ತೇವೆ. ನಾಳೆಯಿಂದ ಅವರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿದರು.
“ನಮ್ಮ ಧರ್ಮದ ವಿರುದ್ಧ ನಿಂತವರು ಸರ್ಕಾರವಾಗಲಿ ಅಥವಾ ಮುಸ್ಲಿಮರಾಗಲಿ, ಅವರಿಗೆ ತಕ್ಕ ಉತ್ತರ ನೀಡಲಾಗುವುದು. ನಮ್ಮ ಕಾರ್ಯಕರ್ತರು ಯಾವಾಗಲೂ ಪ್ರತಿಕ್ರಿಯಿಸುತ್ತಾರೆ” ಎಂದು ಅವರು ಹೇಳಿದರು.
ಮತ್ತೊಂದು ವಿವಾದಾತ್ಮಕ ಹೇಳಿಕೆಯಲ್ಲಿ, “ಕಾಂಗ್ರೆಸ್ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲವಾದರೆ, 1993ರ ಪರಿಸ್ಥಿತಿ ಮತ್ತೆ ಮರುಕಳಿಸಬಹುದು” ಎಂದು ಬೆದರಿಕೆ ಹಾಕಿದ್ದಾರೆ.
ಗೋವಿಂದ ನಾಯಕ್ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿವೆ. ಈಗಾಗಲೇ ಸೂಕ್ಷ್ಮ ವಾತಾವರಣ ಇರುವ ಭಟ್ಕಳದಲ್ಲಿ ಕೋಮು ಹಿಂಸಾಚಾರವನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿವೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
1993ರಲ್ಲಿ ಭಟ್ಕಳದಲ್ಲಿ ಕೋಮು ಗಲಭೆಗಳು ನಡೆದಿದ್ದವು. ಆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿ, ಸಾವು–ನೋವು ಮತ್ತು ಆಸ್ತಿ ಹಾನಿ ಉಂಟಾಗಿತ್ತು. ಆ ಘಟನೆ ಭಟ್ಕಳದ ಇತಿಹಾಸದಲ್ಲಿ ಇಂದಿಗೂ ಸೂಕ್ಷ್ಮ ವಿಷಯವಾಗಿ ಪರಿಗಣಿಸಲಾಗುತ್ತದೆ.
ಪ್ರಸ್ತುತ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಟ್ಕಳದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.






