ಗೋವುಗಳ ಕಳ್ಳತನ ಪ್ರಕರಣ: ತುರ್ತು ಕ್ರಮ ಕೈಗೊಳ್ಳಲು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಆಗ್ರಹ
ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ಮತ್ತು ಭಟ್ಕಳ ಸುತ್ತಮುತ್ತ ವ್ಯಾಪಕವಾಗುತ್ತಿರುವ ಗೋವುಗಳ ಕಳ್ಳತನವು ಸ್ಥಳೀಯ ರೈತ ಮತ್ತು ಕಾರ್ಮಿಕ ಸಮುದಾಯಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಹೊಡೆತ ನೀಡಿದ್ದು, ಜನರಲ್ಲಿ ಆತಂಕ ಮತ್ತು ಅಶಾಂತಿ ಹೆಚ್ಚಿಸಿದೆ. ಇತ್ತೀಚಿನ ಸಿಸಿಟಿವಿ ದೃಶ್ಯಗಳಲ್ಲಿ ಗೋವುಗಳ ಕಳ್ಳತನ ದೃಢಪಟ್ಟ ಹಿನ್ನೆಲೆಯಲ್ಲಿ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಅವರು, ಭಟ್ಕಳ ವ್ಯಾಪ್ತಿಯಲ್ಲಿ ಪದೇ ಪದೇ ಗೊ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದರೂ ಪೊಲೀಸರಿಂದ ಸೂಕ್ತ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದೆ. ಜೊತೆಗೆ, ಇಸ್ಲಾಮಿನ ದೃಷ್ಟಿಯಿಂದ ಕಳ್ಳತನ ಮಾಡಿದ ಜಾನುವಾರು ಗಳ ಮಾಂಸ ಸೇವನೆಯು ನಿಷಿದ್ಧವಾಗಿದ್ದು, ಇದು ದೊಡ್ಡ ಅನ್ಯಾಯವೆಂದು ಹೇಳಿದ್ದಾರೆ.
ಸಮಾಜದಲ್ಲಿ ಶಾಂತಿ ಮತ್ತು ನ್ಯಾಯವನ್ನು ಸ್ಥಾಪಿಸಲು, ತಕ್ಷಣ ಕಾನೂನು ಕ್ರಮ ಜರುಗಿಸಲು ತಂಝೀಮ್ ಪೋಲೀಸ್ ಇಲಾಖೆಯ ಗಮನ ಸೆಳೆಯುವ ಜೊತೆಗೆ, ಸಾರ್ವಜನಿಕರು ಸಹ ಶಾಂತಿ, ತಾಳ್ಮೆಯನ್ನು ಕಾಪಾಡುವಂತೆ ಅಬ್ದುಲ್ ರಖೀಬ್ ಎಂ.ಜೆ., ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.