ಭಟ್ಕಳ ದುರಂತ: ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟಿಹಕ್ಕಲು ಸಮೀಪದ ನದಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(PMNRF)ಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50 ಸಾವಿರ ರೂ. ನೆರವು ನೀಡಲಾಗುವುದು ಎಂದೂ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಕರ್ನಾಟಕದ ಕಾರವಾರ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಕೇಳಿ ತೀವ್ರ ನೋವುಂಟಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ” ಎಂದು ಪ್ರಧಾನಿ ಹೇಳಿದ್ದಾರೆ.
ಭಟ್ಕಳ ತಾಲೂಕಿನ ತಟ್ಟಿಹಕ್ಕಲು ಸಮೀಪದ ವೆಂಕಟಾಪುರ ನದಿಗೆ ಕಪ್ಪೆಚಿಪ್ಪು (ಮಳ್ವಿ) ಸಂಗ್ರಹಿಸಲು ಇಳಿದಿದ್ದ ಒಂದೇ ಕುಟುಂಬದ ಸದಸ್ಯರು ಸೇರಿ 14 ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದರು. ಈ ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.






