Harapanahalli | ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ: ಡಿವೈಎಸ್ಪಿ ಸಂತೋಷ್ ಚವ್ಹಾಣ್

ಹರಪನಹಳ್ಳಿ : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಾತಿ, ಮತ ಭೇದವಿಲ್ಲದೆ ಪರಸ್ಪರ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಸಂತೋಷ್ ಚವ್ಹಾಣ್ ಹೇಳಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಬದುಕಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಲವರು ನೈತಿಕ ಪೊಲೀಸ್‌ಗಿರಿ ಮಾಡಿ ಕಾನೂನು ಕೈಗೆತ್ತಿಕೊಳ್ಳಬಾರದು. ಯಾವುದೇ ಕಾನೂನು ಉಲ್ಲಂಘನೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಹಬ್ಬದ ದಿನ ಪ್ರಮುಖ ಮಸೀದಿಗಳು, ಈದ್ಗಾ ಮೈದಾನಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು.
ಸಿಪಿಐ ಮಹಾಂತೇಶ್ ಸಜ್ಜನ್ ಮಾತನಾಡಿ, ಬಕ್ರೀದ್ ಹಬ್ಬವನ್ನು ಸಹೋದರತ್ವ ಮತ್ತು ಸೌಹಾರ್ದತೆಯ ಸಂಕೇತವಾಗಿ ಆಚರಿಸಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಅಬ್ದುಲ್ ರೆಹಮನ್ ಮಾತನಾಡಿ, ನಗರದಲ್ಲಿ ಎಲ್ಲ ಧರ್ಮಗಳ ಹಬ್ಬಗಳನ್ನು ಅನ್ಯೋನ್ಯತೆಯಿಂದ ಆಚರಿಸುವ ಪರಂಪರೆ ಮುಂದುವರಿಯಬೇಕು ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ಓಂಕಾರ ಗೌಡ, ಖಾಜಾ ಮುಸ್ತಾಕ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






