ಉಳಿದ ಶಿಕ್ಷೆ ಅಥವಾ ಸಂಭಾವ್ಯ ಕ್ಷಮಾದಾನದ ಬಗ್ಗೆ ಸ್ಪಷ್ಟತೆಯ ಅಗತ್ಯವಿದೆ: ನಿಮಿಷಾ ಪ್ರಿಯಾ ಪ್ರಕರಣದ ಕುರಿತು ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿಕೆ

Photo Credit: thehindu
ಹೊಸದಿಲ್ಲಿ: ಯೆಮನ್ ನಲ್ಲಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾರ ಮರಣದಂಡನೆ ಪ್ರಕರಣದಲ್ಲಿ ಮೊದಲ ಬಾರಿಗೆ ವಿವರವಾಗಿ ಪ್ರತಿಕ್ರಿಯಿಸಿರುವ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು, ತನ್ನ ಕಚೇರಿಯ ಮೂಲಕ ಮಾಡಲಾದ ಎಲ್ಲ ಪ್ರಯತ್ನಗಳ ಬಗ್ಗೆ ಪ್ರಧಾನಿ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಲಾಗುತ್ತಿತ್ತು ಎಂದು ‘ದಿ ಫೆಡರಲ್’ಗೆ ನೀಡಿರುವ ವಿಶೇಷ ಸಂದರ್ಶನಲ್ಲಿ ಹೇಳಿದ್ದಾರೆ.
ಉತ್ತರ ಯೆಮನ್ ನಲ್ಲಿ ಅಧಿಕೃತವಾಗಿ ಮಧ್ಯಪ್ರವೇಶಿಸಲು ಭಾರತ ಸರಕಾರವು ಮಿತಿಗಳನ್ನು ಎದುರಿಸುತ್ತಿತ್ತು. ಯೆಮನಿ ವಿದ್ವಾಂಸರೊಂದಿಗೆ ತನ್ನ ದೀರ್ಘಕಾಲದ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳು ಕೊಲೆಗೀಡಾದ ಯುವಕನ ಕುಟುಂಬದೊಂದಿಗೆ ಸಂವಾದವನ್ನು ಆರಂಭಿಸಲು ಅವಕಾಶವನ್ನು ಸೃಷ್ಟಿಸುವಲ್ಲಿ ನೆರವಾದವು ಎಂದು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.
‘ನಾವು ನಮ್ಮ ಮಿತಿಯನ್ನು ಮೀರಿರಲಿಲ್ಲ. ನಾವು ಸರಕಾರದ ಹಾದಿಯನ್ನು ಸುಗಮಗೊಳಿಸಿದ್ದೇವಷ್ಟೇ. ನಮ್ಮ ಮಧ್ಯಪ್ರವೇಶವು ಸಮಾನಾಂತರ ರಾಜತಾಂತ್ರಿಕತೆಯಾಗಿರಲಿಲ್ಲ, ಅದು ಮಾನವೀಯ ಮತ್ತು ನೈತಿಕ ಹಿನ್ನೆಲೆಯಲ್ಲಿ ನಡೆಯಿತು’ ಎಂದು ಒತ್ತಿ ಹೇಳಿದರು.
ತನ್ನ ವಿಶೇಷ ಸಂದರ್ಶನದಲ್ಲಿ ಎ.ಪಿ ಉಸ್ತಾದ್ ಅವರು, ತೆರೆಮರೆಯಲ್ಲಿ ಒಪ್ಪಂದವು ಹೇಗೆ ರೂಪುಗೊಂಡಿತ್ತು, ಸೂಫಿ ವಿದ್ವಾಂಸ ಶೇಖ್ ಅಲ್-ಹಬೀಬ್ ಉಮರ್ ಬಿನ್ ಹಫೀಝ್ ಅವರು ವಹಿಸಿದ್ದ ಪ್ರಮುಖ ಪಾತ್ರ ಮತ್ತು ತನ್ನ ಮಧ್ಯಪ್ರವೇಶದ ಕುರಿತು ಟೀಕೆಗಳು ಪ್ರಮುಖ ಅಂಶವನ್ನು ಏಕೆ ಒಳಗೊಂಡಿರಲಿಲ್ಲ ಎಂಬ ಬಗ್ಗೆ ವಿವರಗಳನ್ನು ತೆರೆದಿಟ್ಟಿದ್ದಾರೆ.
ನಿಮಿಷಾ ಪ್ರಿಯಾರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಈಗ ಅಧಿಕೃತವಾಗಿ ಹೇಳಬಹುದೇ ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಕಾಂತಪುರಂ, ‘ಉತ್ತರ ಯೆಮನ್ ನ ಸೂಫಿ ವಿದ್ವಾಂಸರು ಮತ್ತು ಕಾನೂನು ತಜ್ಞರ ಮಧ್ಯಪ್ರವೇಶದಿಂದಾಗಿ ಜು.16ರಂದು ಜಾರಿಗೊಳ್ಳಬೇಕಿದ್ದ ಮರಣದಂಡನೆಯನ್ನು ಅದಾಗಲೇ ತಾತ್ಕಾಲಿವಾಗಿ ಮುಂದೂಡಲಾಗಿತ್ತು. ಆಗಿನಿಂದ ಶೇಖ್ ಅಲ್-ಹಬೀಬ್ ಉಮರ್ ಬಿನ್ ಹಫೀಝ್ ಅವರ ಪ್ರತಿನಿಧಿಗಳು ಸಂತ್ರಸ್ಥನ ಕುಟುಂಬ ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು. ಕ್ರಿಮಿನಲ್ ಪ್ರಕರಣಗಳಲ್ಲಿ ಇಸ್ಲಾಮಿಕ್ ಶರಿಯಾ ಕಾನೂನಿನೊಳಗೆ ನೀಡಲಾಗಿರುವ ಸಾಧ್ಯತೆಗಳನ್ನು ಬಳಸಿಕೊಂಡು ಇಡೀ ಪ್ರಕ್ರಿಯೆಯನ್ನು ಮುನ್ನಡೆಸಲಾಗಿತ್ತು. ಸಂತ್ರಸ್ಥನ ಕುಟುಂಬವನ್ನು ಸಂವಾದಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದ ಹಫೀಝ್ ಅವರ ಪ್ರತಿನಿಧಿಗಳ ಪ್ರಯತ್ನವು ನಿರ್ಣಾಯಕ ಅಂಶವಾಗಿತ್ತು. ಈ ಪ್ರಯತ್ನಗಳ ಪರಿಣಾಮವಾಗಿ ಜು.28ರಂದು ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿಮಿಷಾ ಪ್ರಿಯಾರ ಮರಣದಂಡನೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಯೆಮೆನ್ ನಲ್ಲಿರುವ ನಮ್ಮ ಪ್ರತಿನಿಧಿಗಳು ನಮಗೆ ಈ ಮಾಹಿತಿಯನ್ನು ನೀಡಿದ್ದಾರೆ ’ಎಂದು ಹೇಳಿದರು.
ಯೆಮನ್ ಕಾನೂನಿನಡಿ ಕೊಲೆಯಾದ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳು ಮಾತ್ರ ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನು ಕ್ಷಮಿಸಬಹುದು. ಅವರು ಕ್ಷಮಿಸಿದರೆ ಮಾತ್ರ ಮರಣದಂಡನೆಯನ್ನು ರದ್ದು ಮಾಡಲಾಗುತ್ತದೆ. ಅವರು ‘ಬ್ಲಡ್ಮನಿ(ರಕ್ತದ ಹಣ)’ಯನ್ನು ಸ್ವೀಕರಿಸಿ ಅಥವಾ ಸ್ವೀಕರಿಸದೆ ಇದನ್ನು ಮಾಡಬಹುದು, ಎಂದು ಹೇಳಿದ ಇಂಡಿಯನ್ ಗ್ರಾಂಡ್ ಮುಫ್ತಿ, ‘ಮಧ್ಯಪ್ರವೇಶಿಸುವಂತೆ ಜನರು ನನ್ನನ್ನು ಕೋರಿಕೊಂಡಾಗ ಪ್ರಕರಣದ ಬಗ್ಗೆ ನಾನು ವಿಚಾರಿಸಿದೆ.ಈ ಪ್ರಕರಣವು ದೇಶದ ಗಮನ ಸೆಳೆದಿರುವ ಒಂದು ಹೈ-ಪ್ರೊಫೈಲ್ ಕೊಲೆಯಾಗಿದೆ ಎನ್ನುವುದನ್ನು ಖುದ್ದು ಯೆಮನಿಗಳಿಂದಲೇ ತಿಳಿದುಕೊಂಡಿದ್ದೆ. ಹೀಗಾಗಿ ಸಂತ್ರಸ್ಥನ ಕುಟುಂಬವನ್ನು ಸಂಪರ್ಕಿಸಲು ಕ್ರಿಯಾ ಸಮಿತಿಗಾಗಲೀ ಇತರರಿಗಾಗಲೀ ಸಾಧ್ಯವಾಗಿರಲಿಲ್ಲ. ಇಲ್ಲಿಯೇ ಹಫೀಝ್ ಅವರ ಮಧ್ಯಪ್ರವೇಶವು ನಿರ್ಣಾಯಕವೆಂದು ಸಾಬೀತಾಗಿದ್ದು, ಅದು ಕುಟುಂಬದೊಂದಿಗೆ ಮಾತುಕತೆಗೆ ಅವಕಾಶವನ್ನು ತೆರದಿತ್ತು. ಸಂವಾದವನ್ನು ಆರಂಭಿಸಲು ಜು.16ರಂದು ನಿಗದಿಯಾಗಿದ್ದ ಮರಣದಂಡನೆ ಜಾರಿಯನ್ನು ಸ್ಥಗಿತಗೊಳಿಸುವುದು ಅಗತ್ಯವಾಗಿತ್ತು. ಸಂತ್ರಸ್ಥನ ಕುಟುಂಬವು ಮಾತುಕತೆಗೆ ಒಪ್ಪಿಕೊಂಡ ಬಳಿಕ ಮುಂದಿನ ಹೆಜ್ಜೆಗಳು ಸುಲಭವಾಗಿದ್ದವು’ ಎಂದು ಸಂದರ್ಶನದಲ್ಲಿ ತಿಳಿಸಿದರು.
ವಿಶೇಷವಾಗಿ ಸಂತ್ರಸ್ತನ ಸೋದರ ನಿರ್ಧಾರವನ್ನು ವಿರೋಧಿಸುತ್ತಿರುವಂತೆ ಕಂಡುಬರುತ್ತಿರುವುದರಿಂದ ಈ ವಿಷಯದಲ್ಲಿ ಮುಂದೇನು ಎಂಬ ಪ್ರಶ್ನೆಗೆ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್, ‘ಈಗ ಮರಣದಂಡನೆ ರದ್ದುಗೊಂಡಿರುವುದರಿಂದ ಉಳಿದ ಶಿಕ್ಷೆ ಅಥವಾ ಸಂಭಾವ್ಯ ಕ್ಷಮಾದಾನದ ಬಗ್ಗೆ ಸ್ಪಷ್ಟತೆಯ ಅಗತ್ಯವಿದೆ. ಸಂತ್ರಸ್ತರನ ಕಾನೂನುಬದ್ಧ ಉತ್ತರಾಧಿಕಾರಿಗಳೊಂದಿಗೆ ಇನ್ನಷ್ಟು ಚರ್ಚೆಗಳ ಮೂಲಕವಷ್ಟೇ ಇದು ತಿಳಿದುಬರಲಿದೆ. ಶೀಘ್ರವೇ ಅನುಕೂಲಕರವಾದ ಫಲಿತಾಂಶವು ದೊರೆಯುವ ಸಾಧ್ಯತೆಯಿದೆ ಎಂದು ಯೆಮನ್ನಲ್ಲಿರುವ ನಮ್ಮ ಪ್ರತಿನಿಧಿಗಳು ತಿಳಿಸಿದ್ದಾರೆ’ ಎಂದು ಉತ್ತರಿಸಿದರು.
ಪ್ರತಿಯೊಬ್ಬರೂ ಧರ್ಮ ಅಥವಾ ರಾಷ್ಟ್ರೀಯತೆಯ ಅಡೆತಡೆಯಿಲ್ಲದೆ ತಮ್ಮ ಸಂಪೂರ್ಣ ಕಾನೂನು ಹಕ್ಕುಗಳಿಗೆ ಅರ್ಹರಾಗಿರಬೇಕು. ಪ್ರತಿಯೊಂದೂ ಕಾನೂನು ವ್ಯವಸ್ಥೆಯು ನಮಗೆ ಕಲಿಯಲು ಏನನ್ನಾದರೂ ಒದಗಿಸುತ್ತದೆ. ಅಂತಹ ಅಂಶಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕು. ಮೂಲಭೂತವಾಗಿ ನಾವೆಲ್ಲ ಮಾನವ ಜೀವಿಗಳಾಗಿದ್ದೇವೆ. ಆ ಬಂಧವನ್ನು ಉಳಿಸಿಕೊಳ್ಳೋಣ. ಶಿಕ್ಷಿಸುವ ಅಧಿಕಾರವಿರುವಾಗ ಕ್ಷಮಿಸುವುದು ಮಾನವತೆಯ ಅತ್ಯುನ್ನತ ರೂಪ ಎಂದು ಪ್ರವಾದಿಯವರು ಬಣ್ಣಿಸಿದ್ದಾರೆ ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಹೇಳಿದ್ದಾರೆ.







