ಹೆಚ್ಚುತ್ತಿರುವ ತಾಪಮಾನ | ರೆಡ್ ಅಲರ್ಟ್ vs ಆರೆಂಜ್ ಅಲರ್ಟ್; ಯಾವುದು ದೇಹಕ್ಕೆ ಹೆಚ್ಚು ಅಪಾಯಕಾರಿ?

ಸಾಂದರ್ಭಿಕ ಚಿತ್ರ | Photo Credit : freepik
ತಾಪಮಾನ ಹೆಚ್ಚುತ್ತಲೇ ಇರುವ ಕಾರಣ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ
ಭಾರತೀಯ ಹವಾಮಾನ ಇಲಾಖೆ (IMD) ಅನೇಕ ರಾಜ್ಯಗಳಲ್ಲಿ ಗಂಭೀರ ಶಾಖದ ಅಲೆಯ ಎಚ್ಚರಿಕೆಗಳನ್ನು ನೀಡಿದೆ. ತಾಪಮಾನ ಹೆಚ್ಚುತ್ತಲೇ ಇರುವ ಕಾರಣ ಜನರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.
IMD ಈ ಬಾರಿ ಉತ್ತರ ಪ್ರದೇಶದ ಪೂರ್ವ ಭಾಗ, ಮಧ್ಯಪ್ರದೇಶದ ಪೂರ್ವ ಭಾಗ, ವಿದರ್ಭ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಗಳಿಗೆ ರೆಡ್ ಅಲರ್ಟ್ ನೀಡಿದೆ. ಹಾಗೆಯೇ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಮಧ್ಯಪ್ರದೇಶದ ಪಶ್ಚಿಮ ಭಾಗ, ಛತ್ತೀಸ್ಗಢ, ಒಡಿಶಾ ಮತ್ತು ತೆಲಂಗಾಣಗಳಿಗೆ ಆರೆಂಜ್ ಅಲರ್ಟ್ ನೀಡಿದೆ.
ಶಾಖದ ಅಲೆ ವ್ಯಾಪಿಸಿರುವ ಈ ಸಂದರ್ಭದಲ್ಲಿ ಹಗುರವಾದ ಹತ್ತಿಯ ಬಟ್ಟೆಗಳನ್ನು ಧರಿಸುವುದು, ಹೆಚ್ಚು ನೀರು ಕುಡಿಯುವಂತೆ, ಸೂರ್ಯನ ಪ್ರಕಾಶಕ್ಕೆ ಒಡ್ಡಿಕೊಳ್ಳದಂತೆ ಮತ್ತು ಸೂರ್ಯನಿಂದ ರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ವೈದ್ಯರು ಈ ಎಚ್ಚರಿಕೆಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದಾರೆ. ದೀರ್ಘಕಾಲ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ದೇಹದ ತಂಪಾಗಿಸುವ ಕಾರ್ಯ ವಿಧಾನಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮುಖ್ಯವಾಗಿ ರೆಡ್ ಅಲರ್ಟ್ ಶಾಖದ ಅಲೆಯ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೇಗನೇ ವೈದ್ಯಕೀಯ ಅಪಾಯವಾಗಿ ಪರಿಣಮಿಸಬಹುದು.
ಡಾ ಪ್ರಭಾತ್ ರಂಜನ್ ಸಿನ್ಹಾ ಅವರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, “ರೆಡ್ ಅಲರ್ಟ್ ಅನ್ನು ತಾಪಮಾನ ಬಹಳ ಅಪಾಯಕಾರಿಯಾಗಿರುವಾಗ ನೀಡಲಾಗುತ್ತದೆ. ಇಂತಹ ಶಾಖಕ್ಕೆ ದೀರ್ಘಕಾಲ ಒಡ್ಡಿಕೊಂಡಾಗ ಗಂಭೀರ ಡಿಹೈಡ್ರೇಶನ್, ಎಲೆಕ್ಟ್ರೊಲೈಟ್ನಲ್ಲಿ ಅಸಮತೋಲನ, ಕಡಿಮೆ ರಕ್ತದೊತ್ತಡ, ಮೂತ್ರಪಿಂಡದ ಒತ್ತಡ, ಹೃದಯ ರಕ್ತನಾಳದ ಒತ್ತಡ ಮತ್ತು ನರವೈಜ್ಞಾನಿಕ ಸಮಸ್ಯೆಗಳು ಉಂಟಾಗಬಹುದು.”
ಮಾನವ ದೇಹ ಸಾಮಾನ್ಯವಾಗಿ ಬೆವರುವ ಮೂಲಕ ತಾಪಮಾನ ನಿಯಂತ್ರಿಸುತ್ತದೆ. ಆದರೆ ತೀವ್ರ ಶಾಖ ಮತ್ತು ತೇವಾಂಶದಲ್ಲಿ ಬೆವರುವುದಿಲ್ಲ. ದೇಹದ ಉಷ್ಣತೆ 40 ಡಿಗ್ರಿ ಸೆಲ್ಷಿಯಸ್ಗಿಂತ ಹೆಚ್ಚಾದಾಗ ಶಾಖದ ಹೊಡೆತಕ್ಕೆ ಕಾರಣವಾಗಬಹುದು. ಶಾಖದ ಹೊಡೆತ (Heatstroke) ಜೀವಕ್ಕೆ ಅಪಾಯಕಾರಿ ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ಈ ಸಂದರ್ಭದಲ್ಲಿ ತಲೆತಿರುವುದು, ಮೂರ್ಛೆ, ನಾಡಿಮಿಡಿತ ಏರುವುದು, ಉಸಿರಾಡಲು ಕಷ್ಟವಾಗುವುದು, ಪ್ರಜ್ಞೆ ಕಳೆದುಕೊಳ್ಳಬಹುದು. ಆಗ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.
ಶಾಖದ ಹೊಡೆತವು ನಿಮಿಷಗಳ ಒಳಗೆ ಮೆದುಳು, ಮೂತ್ರಪಿಂಡಗಳು, ಹೃದಯ ಮತ್ತು ಸ್ನಾಯುಗಳನ್ನು ಹಾನಿಗೊಳಿಸುತ್ತದೆ. ನಿಧಾನವಾಗಿ ಚಿಕಿತ್ಸೆ ಮಾಡೋಣ ಎಂದು ಕಾದರೆ ಮಾರಕವಾಗಿ ಪರಿಣಮಿಸಬಹುದು.
ಆರೆಂಜ್ ಅಲರ್ಟ್ vs ರೆಡ್ ಅಲರ್ಟ್
ವೈದ್ಯಕೀಯವಾಗಿ ಆರೆಂಜ್ ಮತ್ತು ರೆಡ್ ಎರಡೂ ಅಲರ್ಟ್ಗಳು ಗಂಭೀರ ಶಾಖ ಸಂಬಂಧಿತ ಅಪಾಯವನ್ನು ಸೂಚಿಸುತ್ತವೆ. ಆದರೆ ರೆಡ್ ಅಲರ್ಟ್ ನೀಡಿದಾಗ ಹೆಚ್ಚು ಶಾಖ ಸಂಬಂಧಿತ ಅಪಾಯವನ್ನು ಸೂಚಿಸುತ್ತದೆ. ಅಪಾಯ ಗಂಭೀರವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆರೆಂಜ್ ಅಲರ್ಟ್ನಲ್ಲಿ ದೇಹ ಶಾಖದ ಒತ್ತಡವನ್ನು ನಿಭಾಯಿಸಬಹುದಾಗಿದೆ. ಆದರೂ ಡಿಹೈಡ್ರೇಶನ್, ತಲೆನೋವುಗಳು, ಸುಸ್ತು, ದೌರ್ಬಲ್ಯ ಮತ್ತು ಸ್ನಾಯು ಸೆಳೆತದಂತಹ ಲಕ್ಷಣಗಳು ಸಂಭವಿಸಬಹುದು. ರೆಡ್ ಅಲರ್ಟ್ನಲ್ಲಿ ಶಾಖ ಸಂಬಂಧಿತ ಅಪಾಯಕ್ಕೆ ಆಸ್ಪತ್ರೆ ದಾಖಲಾತಿ ಪ್ರಮಾಣ ಹೆಚ್ಚಿರುತ್ತದೆ.
ತಾಪಮಾನ ಹೆಚ್ಚಾದಾಗ ಡಿಹೈಡ್ರೇಶನ್, ತೀವ್ರ ಮೂತ್ರಪಿಂಡದ ಗಾಯ, ಎಲೆಕ್ಟ್ರೋಲೈಟ್ ಅಸಮತೋಲನ, ಹೃದಯ ಮತ್ತು ಶ್ವಾಸಕೋಶದ ರೋಗಿಗಳಿಗೆ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ತುರ್ತು ದಾಖಲಾತಿಯ ಅಗತ್ಯ ಬೀಳಬಹುದು.
ಆರಂಭಿಕ ರೋಗ ಲಕ್ಷಣಗಳಲ್ಲಿ ಅತಿಯಾದ ಬೆವರು, ತೀವ್ರ ಬಾಯಾರಿಕೆ, ಆಯಾಸ, ತಲೆ ತಿರುಗುವುದು, ತಲೆನೋವು, ವಾಕರಿಕೆ, ಸ್ನಾಯು ಸೆಳೆತ, ಕಿರಿಕಿರಿ, ದೌರ್ಬಲ್ಯ ಮತ್ತು ಮೂತ್ರ ವಿಸರ್ಜನೆ ಕಡಿಮೆಯಾಗುವುದನ್ನು ಕಾಣಬಹುದು.
ಕೃಪೆ: indianexpress.com






