ಮಮತಾ ಬ್ಯಾನರ್ಜಿ ವಿರುದ್ಧ ಟಿಎಂಸಿ ಬಂಡಾಯದ ನೇತೃತ್ವ ವಹಿಸಿರುವ ಕಾಕೋಲಿ ಘೋಷ್ ದಸ್ತಿದಾರ್ ಯಾರು?

ಕಾಕೋಲಿ ಘೋಷ್ ದಸ್ತಿದಾರ್ | Photo Credit : PTI
ಕಳೆದ ತಿಂಗಳು ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಸೋಲು ಅನುಭವಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (TMC) ಪಕ್ಷವು ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದೀಗ ಪಕ್ಷದ ಹಿರಿಯ ನಾಯಕಿ ಹಾಗೂ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪಕ್ಷದ ನಾಯಕರು ಒಬ್ಬರಾದ ಮೇಲೊಬ್ಬರಂತೆ ಬಂಡಾಯವೇಳುತ್ತಿದ್ದಾರೆ. ಟಿಎಂಸಿ ಪಕ್ಷದೊಳಗೆ ತಲ್ಲಣ ಮೂಡಿಸಿರುವ ಈ ಬಿಕ್ಕಟ್ಟಿನ ಕೇಂದ್ರಬಿಂದು ಹಿರಿಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್. ಪಕ್ಷದ ಸಂಸದೀಯ ವಲಯದಲ್ಲಿ ಭುಗಿಲೆದ್ದಿರುವ ಈ ಬೃಹತ್ ಬಂಡಾಯದ ಮುಂಚೂಣಿಯಲ್ಲಿದ್ದಾರೆ ಕಾಕೋಲಿ ಘೋಷ್.
ಟಿಎಂಸಿಯ ಸುಮಾರು 20 ಸಂಸದರು ಎನ್ಡಿಎ ಜೊತೆ ಕೈಜೋಡಿಸಲು ಇಚ್ಛಿಸಿದ್ದಾರೆ. ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಸಲ್ಲಿಸಲಾಗಿದೆ ಎಂದು ದಸ್ತಿದಾರ್ ಸೋಮವಾರ (ಜೂನ್ 8) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದರು. ಪಕ್ಷದಿಂದ ಹೊರಬರಲಿರುವ ಈ ಬಂಡಾಯ ಬಣದ ನೇತೃತ್ವವನ್ನು ದಸ್ತಿದಾರ್ ಅವರೇ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸಿಎನ್ಎನ್-ನ್ಯೂಸ್18 ಮೂಲಗಳು ವರದಿ ಮಾಡಿವೆ.
►ಯಾರು ಈ ಕಾಕೋಲಿ ಘೋಷ್ ದಸ್ತಿದಾರ್?
ಕೋಲ್ಕತ್ತಾದಲ್ಲಿ ಜನಿಸಿದ ದಸ್ತಿದಾರ್ ಅವರು ಆರ್ಜಿ ಕರ್ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ ಗಳಿಸಿದ್ದಾರೆ. ಆ ಬಳಿಕ ಅವರು ಲಂಡನ್ನ ಕಿಂಗ್ಸ್ ಕಾಲೇಜಿನಲ್ಲಿ 'ಅಬ್ಸ್ಟೆಟ್ರಿಕ್ ಅಲ್ಟ್ರಾಸೌಂಡ್' ವಿಷಯದಲ್ಲಿ ಸ್ನಾತಕೋತ್ತರ ತರಬೇತಿಯನ್ನು ಪಡೆದರು. ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ, ಅವರು ಪಶ್ಚಿಮ ಬಂಗಾಳದಲ್ಲಿ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಟಿಎಂಸಿ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ದಸ್ತಿದಾರ್ ಅವರು, ತೃಣಮೂಲ ಕಾಂಗ್ರೆಸ್ನ ಮಹಿಳಾ ಘಟಕ 'ಆಲ್ ಇಂಡಿಯಾ ತೃಣಮೂಲ ಮಹಿಳಾ ಕಾಂಗ್ರೆಸ್'ನ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಿಂದ ಇವರು ವೈದ್ಯೆ.
ಮಮತಾ ಬ್ಯಾನರ್ಜಿ ಅವರೊಂದಿಗೆ ಇವರ ಒಡನಾಟ ಸುಮಾರು ಐದು ದಶಕಗಳಷ್ಟು ಹಳೆಯದು. ದಸ್ತಿದಾರ್ ಅವರು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ಹಳೆಯ ರಾಜಕೀಯ ಸಹವರ್ತಿಯೂ ಹೌದು.
ಕೋಲ್ಕತ್ತಾದ ಕಾಂಗ್ರೆಸ್ ವಿದ್ಯಾರ್ಥಿ ಚಳವಳಿಯ ಮೂಲಕ ಇವರ ರಾಜಕೀಯ ಜೀವನ ಆರಂಭವಾಯಿತು. ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿ ರಾಜಕೀಯದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದೇ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ಜೋಗಮಾಯಾ ದೇವಿ ಕಾಲೇಜಿನಲ್ಲಿ ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಳ್ಳುತ್ತಿದ್ದರು.
'ಮನಿ ಕಂಟ್ರೋಲ್' ವರದಿಯ ಪ್ರಕಾರ, 1984ರ ಲೋಕಸಭಾ ಚುನಾವಣೆಯಲ್ಲಿ ಜಾದವ್ಪುರ ಕ್ಷೇತ್ರದಿಂದ ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಸೋಮನಾಥ್ ಚಟರ್ಜಿ ಅವರನ್ನು ಮಮತಾ ಬ್ಯಾನರ್ಜಿ ಪರಾಭವಗೊಳಿಸಿದ್ದರು. ಈ ಐತಿಹಾಸಿಕ ಜಯದ ನಂತರ ದಸ್ತಿದಾರ್ ಮತ್ತು ಬ್ಯಾನರ್ಜಿ ನಡುವಿನ ಒಡನಾಟ ಮತ್ತಷ್ಟು ಗಟ್ಟಿಯಾಗಿತ್ತು. ನಂತರದ ವರ್ಷಗಳಲ್ಲಿ, ದಸ್ತಿದಾರ್ ಅವರು ಪಕ್ಷದೊಳಗೆ ಒಬ್ಬ ಪ್ರಮುಖ ಸಾಂಘಿಕ ನಾಯಕಿಯಾಗಿ ಮತ್ತು ಅತ್ಯಂತ ಪ್ರಭಾವಶಾಲಿ ಮಹಿಳಾ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು.
ಅವರು ಬಾರಾಸತ್ ಲೋಕಸಭಾ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದು, 2009, 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ . ಅಲ್ಲದೆ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಂಸತ್ತಿನಲ್ಲಿ ನಿರಂತರವಾಗಿ ಧ್ವನಿ ಎತ್ತಿದ್ದಾರೆ.
ದಸ್ತಿದಾರ್ ಅವರು ಲೋಕಸಭೆಯಲ್ಲಿ ಟಿಎಂಸಿ ಸಂಸದೀಯ ಪಕ್ಷದ ಉಪನಾಯಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಮಹುವಾ ಮೊಯಿತ್ರಾ ಅವರೊಂದಿಗಿನ ಸಾರ್ವಜನಿಕ ಜಗಳದ ನಂತರ ಕಲ್ಯಾಣ್ ಬ್ಯಾನರ್ಜಿ ಅವರು ಮುಖ್ಯ ಸಚೇತಕ ಹುದ್ದೆಯಿಂದ ಕೆಳಗಿಳಿದಾಗ, ಆ ಸ್ಥಾನಕ್ಕೆ ದಸ್ತಿದಾರ್ ಅವರನ್ನು ನೇಮಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಅವರ ಸ್ಥಾನಕ್ಕೆ ಮತ್ತೆ ಕಲ್ಯಾಣ್ ಬ್ಯಾನರ್ಜಿ ಅವರನ್ನೇ ಮುಖ್ಯ ಸಚೇತಕರನ್ನಾಗಿ ನೇಮಿಸಿದಾಗ, ಪಕ್ಷದ ನಾಯಕತ್ವದೊಂದಿಗೆ ದಸ್ತಿದಾರ್ ಅವರ ಸಂಬಂಧ ಹಳಸತೊಡಗಿತು. ಇಂದು, ದಸ್ತಿದಾರ್ ಅವರೇ ಮಮತಾ ಬ್ಯಾನರ್ಜಿ ಅವರಿಗೆ ಅತ್ಯಂತ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದ್ದಾರೆ.
►ಮಾಧ್ಯಮಗಳ ಗಮನ ಸೆಳೆಯುವ ತಂತ್ರ
ಇಂದಿಗೂ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ನಾಯಕತ್ವದ ಬೆನ್ನಿಗೆ ನಿಂತಿರುವ ನಾಯಕರ ಬಗ್ಗೆ ಪ್ರಶ್ನಿಸಿದಾಗ, ದಸ್ತಿದಾರ್ ಅವರು ಆ ನಾಯಕರ ರಾಜಕೀಯ ಅರ್ಹತೆಗಳನ್ನು ತಳ್ಳಿಹಾಕಿದ್ದಲ್ಲದೆ, ಅವರ ಉದ್ದೇಶಗಳನ್ನೂ ಪ್ರಶ್ನಿಸಿದರು.
ಸಿಎನ್ಎನ್-ನ್ಯೂಸ್18 ಜತೆ ಮಾತನಾಡಿದ ಅವರು "ನಾನು ನಿಮಗೊಂದು ಮಾತು ಹೇಳುತ್ತೇನೆ. ಮಮತಾ ಬ್ಯಾನರ್ಜಿ ಅವರೊಂದಿಗೆ ಸುದೀರ್ಘ ಕಾಲದಿಂದ ಇರುವ ಕೆಲವು ಜನರಿದ್ದಾರೆ ಎಂದು ನೀವು ಹೇಳಿದ್ದೀರಿ. ಆದರೆ ಅವರು (ಮಮತಾ) ಕೇವಲ ತಮ್ಮ ಸ್ವಂತ ಪ್ರಚಾರಕ್ಕಾಗಿ ಮಾಧ್ಯಮಗಳ ಗಮನ ಸೆಳೆಯಲು ಹಂಬಲಿಸುವ ಮಹಿಳೆ ಎಂದಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಸೇರಲು ಬಯಸಿರುವ ಸಂಸದರನ್ನು "ದುರಾಸೆಯವರು" ಮತ್ತು "ಸ್ವಾರ್ಥಿ ದೇಶದ್ರೋಹಿಗಳು" ಎಂದು ಇತ್ತೀಚೆಗೆ ಟಿಎಂಸಿಯ ಹಿರಿಯ ನಾಯಕರೊಬ್ಬರು ಟೀಕಿಸಿದ್ದರು. ದಸ್ತಿದಾರ್ ಅವರ ಈ ಹೇಳಿಕೆಯು ಆ ಟೀಕೆಗೆ ನೀಡಿದ ಪ್ರತಿಕ್ರಿಯೆಯಂತೆ ಕಂಡುಬಂದಿದೆ. ಆದಾಗ್ಯೂ,ದಸ್ತಿದಾರ್ ಅವರು ತಮ್ಮ ಹೇಳಿಕೆಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
►ಟಿಎಂಸಿ ಪಕ್ಷವು ಪತನದ ಅಂಚಿನಲ್ಲಿದೆಯೇ?
ಟಿಎಂಸಿ ಒಳಗಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಪಶ್ಚಿಮ ಬಂಗಾಳದ ಶಾಸಕರಲ್ಲಿ ಆರಂಭವಾದ ಬಂಡಾಯ, ಈಗ ರಾಜೀನಾಮೆಗಳು ಮತ್ತು ಬಹಿರಂಗ ಅಸಮಾಧಾನದ ರೂಪದಲ್ಲಿ ಸಂಸತ್ತಿಗೂ ಹರಡಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ದಸ್ತಿದಾರ್ ಸೇರಿದಂತೆ ಸುಮಾರು 20 ತೃಣಮೂಲ ಸಂಸದರು, ತಮಗೆ ಸಂಸತ್ತಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೋರಿದ್ದಾರೆ ಎಂದು ವರದಿಗಳು ತಿಳಿಸಿವೆ.
"ನನ್ನ ತಲೆ ಕತ್ತರಿಸಬಹುದೇ ಹೊರತು ನಾನು ತಲೆ ಬಾಗುವುದಿಲ್ಲ... ನಾನು ಸಾಕಷ್ಟು ಸಹಿಸಿಕೊಂಡಿದ್ದೇನೆ. 2011ರಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ನಂತರ ನಾನು ಇಲ್ಲಿಗೆ ಬಂದಿಲ್ಲ. ಕಳೆದ 40 ವರ್ಷಗಳಿಂದ ನಾನು ಇಲ್ಲಿ ಹೋರಾಡುತ್ತಿದ್ದೇನೆ. ನಾನು ಮೊದಲೇ ಹೇಳಿದಂತೆ, ಇಂತಹ ಜನರ ಮಾತುಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರಲ್ಲ" ಎಂದು ತಮ್ಮ ಮೇಲಿನ ಅವಕಾಶವಾದಿ ರಾಜಕಾರಣದ ಆರೋಪಗಳನ್ನು ದಸ್ತಿದಾರ್ ತಳ್ಳಿಹಾಕಿದ್ದಾರೆ.
ನಾವು 20 ಸಂಸದರು ಸ್ಪೀಕರ್ ಬಳಿ ಪ್ರತ್ಯೇಕ ಆಸನಕ್ಕಾಗಿ ವಿನಂತಿಸಿದ್ದೇವೆ. ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಬಾರಾಸತ್ ಸಂಸದೆಯಾಗಿದ್ದ ದಸ್ತಿದಾರ್ ಅವರ ಸ್ಥಾನಕ್ಕೆ ಕಲ್ಯಾಣ್ ಬ್ಯಾನರ್ಜಿ ಅವರನ್ನು ಸಚೇತಕರನ್ನಾಗಿ ನೇಮಿಸಿದಾಗಿನಿಂದ ಅವರು ಪಕ್ಷದ ವಿರುದ್ಧ ಬಂಡಾಯದ ಹಾದಿ ಹಿಡಿದಿದ್ದಾರೆ. ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ ದಸ್ತಿದಾರ್, ಕೆಲವೇ ದಿನಗಳಲ್ಲಿ ತಮ್ಮ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು NDTV ವರದಿ ಮಾಡಿದೆ.
ಬಂಗಾಳದ 2026 ರ ವಿಧಾನಸಭೆ ಚುನಾವಣೆಯ ನಂತರ, ತಳಮಟ್ಟದಲ್ಲೂ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಟಿಎಂಸಿಯ ಹಿರಿಯ ನಾಯಕ ಮತ್ತು ಮಮತಾ ಬ್ಯಾನರ್ಜಿ ಅವರ ಸೋದರಳಿಯನನ್ನು ಉದ್ರಿಕ್ತ ಗುಂಪುಗಳು ಗುರಿಯಾಗಿಸಿಕೊಂಡಿದ್ದವು.
ಟಿಎಂಸಿಯ ಉನ್ನತ ಮಟ್ಟದ ನಾಯಕರೇ ಈಗ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಸುಮಾರು 100 ಕೌನ್ಸಿಲರ್ಗಳು ಪಕ್ಷ ತೊರೆದಿದ್ದಾರೆ. ಇದುವರೆಗೆ ಮಾಜಿ ಮುಖ್ಯಮಂತ್ರಿಯವರನ್ನು "ದೀದಿ" ಎಂದು ಗೌರವದಿಂದ ಕರೆಯುತ್ತಿದ್ದ ಹಲವರು, ಈಗ ಅವರ ಹೆಸರನ್ನೇ ಹಿಡಿದು ಸಂಬೋಧಿಸಲು ಪ್ರಾರಂಭಿಸಿದ್ದಾರೆ.






