ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಆರೋಗ್ಯ ರಕ್ಷಣೆ, ಚಿಕಿತ್ಸೆಯನ್ನು ಪಡೆಯುವ ಹಕ್ಕಿದೆ : ನ್ಯಾ.ಮರುಳಸಿದ್ದಾರಾಧ್ಯ

ಯಾದಗಿರಿ: ಸಾಮಾನ್ಯವಾಗಿ ಎಲ್ಲರೂ ಒತ್ತಡವನ್ನು ಹಾಗೂ ಜೀವನದ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ ಒತ್ತಡವನ್ನು ಮತ್ತು ಸವಾಲುಗಳನ್ನು ಎದುರಿಸದೆ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈಗ ಮಾನಸಿಕ ಅಸ್ವಸ್ಥೆಗಳಿಗೆ ಚಿಕಿತ್ಸೆಯು ಎಲ್ಲಾ ಕಡೆ ಲಭ್ಯಯಿರುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆಯನ್ನು ಪಡೆಯುವ ಹಕ್ಕಿದೆ ಎಂದು ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಎಚ್.ಜೆ ಅವರು ಹೇಳಿದರು.
ಯಾದಗಿರಿ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ 2025ರ ಅ.10 ರಂದು ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಎಲ್ಲರೂ ಒತ್ತಡವನ್ನು ಹಾಗೂ ಜೀವನದ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ, ಒತ್ತಡವನ್ನು ಮತ್ತು ಸವಾಲುಗಳನ್ನು ಎದುರಿಸದೆ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮನೋ ವೈದ್ಯರಾದ ಅಮಿತ್ ಕುಮಾರ ಅವರು ಮಾತನಾಡಿ, ಮಾನಸಿಕ ಆರೋಗ್ಯ ಎಂದರೇನು ಎಂಬುದರ ಬಗ್ಗೆ ವಿಶ್ಲೇಷಿಸಿದರು. ಗಂಡು ಅಥವಾ ಹೆಣ್ಣು ತಮ್ಮ ಸಾಮರ್ಥ್ಯಗಳನ್ನು ಅರಿತುಕೊಂಡು ಜೀವನ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಕೀಲರು ಮತ್ತು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್.ಎಸ್.ಪಾಟೀಲ್ ಅವರು ಮಾತನಾಡಿ, ಎಲ್ಲರೂ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರೆಯಪ್ಪ ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನ ಗೀತೆ ವಕೀಲರಾದ ಆನಂದ ಕುಮಾರ ಸ್ವಾಮಿ ಹಾಡಿದರು. ವಕೀಲರಾದ ಶ್ರೀ ಭೀಮಾಶಂಕರ್ ಆಶನಾಳ್ ವಂದಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಯಾದಗಿರಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎ.ಈರಣ್ಣ, ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರು ಬಾಳಾಸಾಹೇಬ್ ವಡವಾಡೆ, ಯಾದಗಿರಿ ಪ್ರಧಾನ ಸಿವಿಲ್ ಜೆ.ಎಮ್.ಎಫ್.ಸಿ ನ್ಯಾಯಾಧೀಶರು ಅರುಣ್ ಚೌಗುಲೆ, ಯಾದಗಿರಿ ಹೆಚ್ಚುವರಿ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಧೀಶರು ರಾಹುಲ್ ರಾವ್, ನ್ಯಾಯಾಲಯದ ಹಿರಿಯ ಹಾಗೂ ಕಿರಿಯ ವಕೀಲರು, ನ್ಯಾಯಾಲಯದ ಸಿಬಂಧಿಗಳು ಹಾಗೂ ಕಕ್ಷಿದಾರರು ಉಪಸ್ಥಿತರಿದ್ದರು.







