ಯಾದಗಿರಿ | ಕೊಂಗಂಡಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಆರೋಪ : ಕ್ರಮಕ್ಕೆ ಮನವಿ

ಯಾದಗಿರಿ: ವಡಿಗೇರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ದಲಿತ ಸಮುದಾಯದವರ ಮೇಲೆ ದೌರ್ಜನ್ಯ ಹಾಗೂ ಜೀವ ಬೆದರಿಕೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ (ಕ್ರಾಂತಿಕಾರಿ ರಾಜ್ಯ ಸಮಿತಿ) ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಿಜಾಮರ ಕಾಲದಿಂದಲೂ ಬಳಕೆಯಲ್ಲಿದ್ದ ಸಮುದಾಯದ ಬಾವಿಯನ್ನು ಮೇಲ್ವರ್ಗದವರು ಕೆಡವಿರುವುದರ ಜೊತೆಗೆ ಸರಕಾರಿ ಸರ್ವೇ ನಂ. 12/6ರಲ್ಲಿ ದಾಖಲಾಗಿರುವ 3 ಗುಂಟೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿರುವುದಾಗಿ ದೂರಿದ್ದಾರೆ.
ಸೆ.1ರಂದು ನಿಂಗಪ್ಪ ಬರಿ ಎಂಬುವವರ ಮೇಲೆ ಹಲ್ಲೆ ನಡೆಸಿ, "ಮನೆ ಖಾಲಿ ಮಾಡದಿದ್ದರೆ ಜೀವಂತ ಉಳಿಯುವುದಿಲ್ಲ" ಎಂದು ಬೆದರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಸ್ತುತ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಕಾರಣರಾದ ಆರು ಜನರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯವರು ಆಗ್ರಹಿಸಿದ್ದಾರೆ.
ಈ ಬೇಡಿಕೆಗಳನ್ನು ಪೂರೈಸದಿದ್ದರೆ ಸೆ.10ರಿಂದ ವಡಿಗೇರ ಪೊಲೀಸ್ ಠಾಣೆಯ ಎದುರು ಅಮರಣಾಂತ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.







