ಯಾದಗಿರಿ | ಸೆ.13ರಂದು ಪ್ರವಾದಿ ಮುಹಮ್ಮದ್ ʼಸೀರತ್ ಅಭಿಯಾನʼ ಕಾರ್ಯಕ್ರಮ : ಸಲಾವುದ್ದೀನ್ ಜಾಗೀರದಾರ

ಯಾದಗಿರಿ: ನಾಡಿನಲ್ಲಿ ಪ್ರವಾದಿ ಮುಹಮ್ಮದ್ ಅವರ ನ್ಯಾಯ ಮತ್ತು ಮಾನವೀಯ ಸಂದೇಶಗಳನ್ನು ಗಿರಿ ಜಿಲ್ಲೆಯ ಜನರಿಗೆ ತಲುಪಿಸುವ ದೃಷ್ಟಿಯಿಂದ ಸೆ.13ರ ಶನಿವಾರ ಬೆಳಿಗ್ಗೆ 11ಕ್ಕೆ ನಗರದ ಈಡನ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ʼಸೀರತ್ ಅಭಿಯಾನʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್, ಸಮಿತಿಯ ನಗರಾಧ್ಯಕ್ಷ ಸಲಾವುದ್ದೀನ್ ಜಾಗೀರದಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವಾದಿಯವರ ಬಗ್ಗೆ ಸಮಾಜದಲ್ಲಿರುವ ಕೆಲ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದರ ಜೊತೆಗೆ ಜನರಿಗೆ ನ್ಯಾಯ ಮತ್ತು ಮಾನವೀಯ ಸಂದೇಶಗಳನ್ನು ತಲುಪಿಸುವುದು ಹಾಗೂ ಸಮಾಜದಲ್ಲಿರುವ ಎಲ್ಲಾ ವರ್ಗದ ಜನರೊಂದಿಗೆ ಸಾಮರಸ್ಯ ಬಲಪಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುಮಿಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮಿಜಿ, ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಹಲಕಟಿಯ ಶರೀಫ್ ಸಾಹೇಬರು, ಫಾದರ್ ಸೇರಿದಂತೆ ಸರ್ವ ಧರ್ಮದ ಗುರುಗಳು ಹಾಗೂ ಗಣ್ಯರು ಉಪಸ್ಥಿತರಿರುವರು.
ಸಮಾರಂಭದಲ್ಲಿ ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಪ್ರವಾದಿ ಮುಹಮ್ಮದ್ ರನ್ನು ಅರಿಯಿರಿ ಹಾಗೂ ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ ರ ಆದರ್ಶದ ಔಚಿತ್ಯ ಎಂಬ 2 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ನಿಮಿತ್ಯ ಸಮಿತಿಯಿಂದ ನಗರದಲ್ಲಿ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ವಿಧ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಮುಹಮ್ಮದ್ ಅಮ್ಜದ್ ಹುಸೇನ್, ಉಪಾಧ್ಯಕ್ಷರಾದ ಮಹಿಬೂಬ್‌ಸಾಬ್ ಖಯ್ಯಾತ್, ಜಾಕಿರ್ ಅಹ್ಮದ್, ಅಬ್ದುಲ್ ವಾಸೆ ಕೊತ್, ಅಬ್ದುಲ್ ಮಜೀದ್ ಸಗ್ರಿ, ಸಮಿಯುಲ್ಲಾ, ಸಲೀಂ ತುಮಕುರಿ, ಕರೀಮ್ ಸಾಬ್ ಸಗ್ರಿ, ಎಂಡಿ ಸಾಲಿ, ಮಹ್ಮದ್ ಮುಕ್ತಿಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







