ಧರ್ಮ, ಜಾತಿ, ದ್ವೇಷದ ಗೋಡೆ ಒಡೆದು ಪ್ರೀತಿಯ ಹೂ ಅರಳಬೇಕು : ರಾಮ್ ಪುನಿಯಾನಿ
ಸಿಂಧನೂರು( ರಾಯಚೂರು): ಆರೆಸ್ಸೆಸ್, ಸಂಘ-ಪರಿವಾರದವರು ಜಾತಿ, ಧರ್ಮಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದು, ದ್ವೇಷದ ಗೋಡೆಯನ್ನು ಹೊಡೆದು ಹಾಕಿ ಪ್ರೀತಿಯ ಹೂ ಅರಳಿಸುವ ಕೆಲಸ ಮಾಡಬೇಕು ಎಂದು ಚಿಂತಕ ರಾಮ್ ಪುನಿಯಾನಿ ಮುಂಬಯಿ ಸಲಹೆ ನೀಡಿದರು.
ಜಿಲ್ಲೆಯ ಸಿಂಧನೂರು ನಗರದ ಸತ್ಯ ಗಾರ್ಡನ್ ನಲ್ಲಿ "ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು -ಇಂದು" ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ʼಮೇ ಸಾಹಿತ್ಯ ಬಳಗ ಸಿಂಧನೂರುʼ ನೇತೃತ್ವದಲ್ಲಿ ಆಯೋಜಿಸಿದ್ದ ʼ11ನೇ ಮೇ ಸಾಹಿತ್ಯ ಮೇಳʼದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಅಸಮಾನತೆ ಅಳಿಸಿ, ಸಮಾನತೆ ಎತ್ತಿಹಿಡಿಯಬೇಕು. ಭಗತ್ ಸಿಂಗ್, ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಿ, ಪ್ರತಿಯೊಬ್ಬರ ಮನಸ್ಸುಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಆರೋಗ್ಯಯುತ ಸಮಾಜ ಕಟ್ಟಲು ಚಳವಳಿ ಜೀವಂತವಾಗಿರಬೇಕು. ಸಂವಿಧಾನದ ಆಶಯಗಳನ್ನು ಮನೆ ಮನೆಗೆ ತಲುಪಿಸಿ ಸಧೃಢ ಭಾರತ ನಿರ್ಮಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದು ಹೇಳಿದರು.
ದೇಶದಲ್ಲಿ ತಾಂಡವವಾಡುತ್ತಿರುವ ಗುಲಾಮಿತನವನ್ನು ನಾಶ ಮಾಡಬೇಕು. ದಾಸ್ಯ ಮುಕ್ತ ಸಮಾಜ ನಿರ್ಮಿಸುವ ಕೆಲಸವಾಗಬೇಕು. ದಲಿತರ ಮೇಲಿನ ದೌರ್ಜನ್ಯ, ಸ್ತ್ರೀ-ಪುರುಷ ಅಸಮಾನತೆಗೆ ಕಡಿವಾಣ ಹಾಕಬೇಕು. ಮನುಷ್ಯತ್ವವನ್ನು ಪಸರಿಸಿ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ನವದೆಹಲಿ ವಿಶ್ವವಿದ್ಯಾಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರೊ.ಶಂಶುಲ್ ಇಸ್ಲಾಂ ಮಾತನಾಡಿ, ಭಾರತವನ್ನು ಹನ್ನೊಂದು ನೂರು ವರ್ಷಗಳ ಕಾಲ ಮುಸ್ಲಿಂ ರಾಜರು ಆಳಿದರೂ ಕೂಡ ದೇಶ ಇಸ್ಲಾಂ ರಾಷ್ಟ್ರವಾಗಿಲ್ಲ. ಯಾವ ಯುದ್ಧಗಳೂ ಹಿಂದೂ-ಮುಸ್ಲಿಂ ವಿಷಯದ ಮೇಲೆ ನಡೆದಿಲ್ಲ. ಯುದ್ಧ ನಡೆಯಲು ಬೇರೆ-ಬೇರೆ ಕಾರಣಗಳಿವೆ. ಹಲವಾರು ಹಿಂದೂ ರಾಜರಿಗೆ ಮುಸ್ಲಿಂ ಸಲಹೆಗಾರರಿದ್ದರು. ಮುಸ್ಲಿಂ ರಾಜರೊಂದಿಗೆ ಹಿಂದೂ ಸಲಹೆಗಾರರು, ಆಡಳಿತಗಾರರು ಇದ್ದರು. ಆದರೆ ಇದನ್ನು ಮುಚ್ಚಿಟ್ಟು ಇತಿಹಾಸವನ್ನು ತಿರುಚಿ ಪ್ರಚಾರಪಡಿಸಲಾಗುತ್ತಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಔರಂಗಾಬಾದ್‌ನ ಹೋರಾಟಗಾರ್ತಿ ಮಾಲತಿ ವರಾಳೆ ಮಾತನಾಡಿ, ಶಿಕ್ಷಣ ಖಾಸಗೀಕರಣದಿಂದಾಗಿ ಗುಣಮಟ್ಟದ ಶಿಕ್ಷಣ ತಳ ಸಮುದಾಯದ ಮಕ್ಕಳಿಗೆ ಕೈಗೆಟುಕದಂತಾಗಿದೆ. ಇದರಿಂದ ದಲಿತ-ದಮನಿತ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಜಾತೀಯತೆ, ಲಿಂಗ ಅಸಮಾನತೆ, ಭ್ರೂಣಹತ್ಯೆ ನಡೆಯುತ್ತಿರುವುದು ವಿಷಾದಕರ. ಇದು ಕಡಿಮೆಯಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಜಾತಿ ಮತ್ತು ಲಿಂಗಭೇದ ಶತಶತಮಾನಗಳಿಂದ ಮುಂದುವರಿದಿದೆ. ಒಂದು ಸಮಾಜವನ್ನು ಇನ್ನೊಂದು ಸಮಾಜ ತುಳಿಯುತ್ತಾ ಶೋಷಣೆ ಮಾಡುತ್ತಾ ಬಂದಿದೆ. ಇದು ನಿಲ್ಲಬೇಕು. ಭಗವಾನ್ ಬುದ್ಧ ಅವರು ಮೊಟ್ಟ ಮೊದಲ ಸಮಾನತೆಯ ಪ್ರತಿಪಾದಕರಾಗಿದ್ದಾರೆ ಎಂದು ಹೇಳಿದರು.
ಹಂಪಿ ವಿಶ್ವ ವಿದ್ಯಾಲಯದ ಪ್ರಾದ್ಯಾಪಕ ಬಿ.ಎಂ.ಪುಟ್ಟಯ್ಯ ಅವರು ಮಾತನಾಡಿ, ಭಾರತದಲ್ಲಿ ಅಸಮಾನತೆ ಎಷ್ಟಿದೆ ಎಂಬುದನ್ನು ಲೆಕ್ಕಹಾಕಬಹುದು. ಅಂಕಿ-ಅಂಶಗಳ ಇಲ್ಲವೇ ಕೋಷ್ಟಕದ ಮೂಲಕ ಇಷ್ಟು ಪ್ರಮಾಣದ ಅಸಮಾನತೆ ಇದೆ ಎಂದು ಹೇಳಬಹುದು. ಆದರೆ ಅಪಮಾನವನ್ನು ಯಾವ ಮಾನದಂಡದ ಮೂಲಕ ಅಳೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಭಾರತದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಜೊತೆಗೆ ಅಪಮಾನದ ಕರಾಳ ಚರಿತ್ರೆಯಿದೆ. ವರ್ತಮಾನದಲ್ಲಿ ಅದು ಮುಂದುವರಿದಿದೆ. ಜಾತಿ ಗಣತಿಗೆ ಹೋದಾಗ ಮಾದಿಗರು, ಹೊಲೆಯರು ತಾವು ತಮ್ಮ ಸಮುದಾಯದ ಹೆಸರು ಬರೆಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಅಪಮಾನ ಮಾಡುವಂತಹ ಜನರಿಂದಾಗಿ ಈ ಸ್ಥಿತಿ ಹೀಗೇ ಮುಂದುವರಿದಿದೆ ಎಂದು ಹೇಳಿದರು.
ಮೆದಕಿನಾಳ ಭೂ ಹೋರಾಟಗಾರ್ತಿ ಸಂಗಮ್ಮ, ದಲಿತ ಚಳವಳಿ ಹೋರಾಟಗಾರ ಭೀಮಣ್ಣ ನಗನೂರು, ಕಾರ್ಮಿಕ ಚಳವಳಿ ಮುಖಂಡ ನರಸಿಂಹಮ್ಮ, ಮದ್ಯವಿರೋಧಿ ಹೋರಾಟಗಾರ್ತಿ ಚಿನ್ನಮ್ಮ ಮುದ್ದನಗುಡ್ಡಿ, ರೈತ ಚಳವಳಿ ಮುಖಂಡ ತಿಮ್ಮನಗೌಡ ಚಿಲ್ಕರಾಗಿ ಕಾರ್ಯಕ್ರಮ ಉದ್ಘಾಟಿಸಿದರು.
ಔರಂಗಬಾದ್ ನ ಚಿಂತಕಿ ಮಾಲತಿ ವರಾಳೆ, ನವದೆಹಲಿಯ ಶಂಸುಲ್ ಇಸ್ಲಾಂ, ಹಂಪಿ ವಿ.ವಿ.ಯ ಪ್ರಾಧ್ಯಾಪಕ ಪುಟ್ಟಯ್ಯ, ಫಾದರ್ ವಿನೋದ ಪೌಲ್, ಹಸನ್ ಸಾಬ್ , ಪಿ.ರುದ್ರಪ್ಪ, ಮೋಕ್ಷಮ್ಮ ಹೇಮಂತ ಎಂ.ಭೂತನಾಳ, ಅನಿಲ್ ಹೊಸಮನಿ, ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕಾಧ್ಯಕ್ಷ ಟಿ.ಹುಸೇನ್ ಸಾಬ್ ವೇದಿಕೆಯಲ್ಲಿದ್ದರು.
ಎಸ್.ದೇವೆಂದ್ರಗೌಡ, ಅಶೋಕ ನಂಜಲದಿನ್ನಿ ನಿರ್ಣಯಗಳ ಮಂಡಿಸಿದರು. ಬಸವರಾಜ ಬಾದರ್ಲಿ ಕ್ರಾಂತಿ ಹಾಡಿದರೆ, ಡಿ.ಹೆಚ್.ಕಂಬಳಿ ಸ್ವಾಗತಿಸಿದರು.