ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ
ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ: ಪುರುರಾಜ ಸಿಂಗ್ ಸೋಲಂಕಿ
ರಾಯಚೂರು : ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ ಸಾಧ್ಯವೆಂದು ಪ್ರೋಬೆಷನರಿ ಐಎಎಸ್ ಅಧಿಕಾರಿ ಪುರುರಾಜ ಸಿಂಗ್ ಸೋಲಂಕಿ ಹೇಳಿದರು.
ಗುರುವಾರ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರು ರಿಪೋರ್ಟ್ಸ್ ಗಿಲ್ಡ್ ಹಾಗು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಯಾಂತ್ರಿಕ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧಿಸಲು ಕ್ರೀಡೆ ಅತ್ಯಂತ ಸಹಕಾರಿಯಾಗಿದ್ದು, ನಾವೆಲ್ಲರೂ ನಮ್ಮ ಬಿಡುವಿನ ಸಮಯದಲ್ಲಿ ಕ್ರೀಡೆಗಳಲ್ಲಿ ತೊಡಗಬೇಕೆಂದರು.
ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತರಾದ ಬಿ.ವೆಂಕಟ ಸಿಂಗ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಸ್ವಾಮಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಮಾತನಾಡಿದರು.
ರಾಯಚೂರು ರಿಪೋರ್ಟ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್, ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಘದ ಅಧ್ಯಕ್ಷ ಚೆನ್ನಬಸವ ಬಾಗಲವಾಡ , ರಿಪೋರ್ಟ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೂಗಾರ್, ಖಜಾಂಚಿ ಸಣ್ಣ ಈರಣ್ಣ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಖಾನ್ ಸಾಬ್ ಮೋಮಿನ್, ಕ್ರೀಡಾ ವಸ್ತುವಾರಿಗಳಾದ ಶ್ರೀಕಾಂತ ಸಾವೂರು, ರಿಪೋರ್ಟ್ಸ್ ಗಿಲ್ಡ್ ನಿಕಟಪೂರ್ವ ಅಧ್ಯಕ್ಷ ಚೆನ್ನಬಸವಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಾ ಶಾವಂತಗೇರಿ ಸೇರಿದಂತೆ ಹಿರಿಯ ಕಿರಿಯ ಪತ್ರಕರ್ತರು, ಅನೇಕರು ಇದ್ದರು.
ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್ ತಂಡ , ಜಿಲ್ಲಾ ಸರ್ಕಾರಿ ನೌಕರರ ತಂಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ತಂಡ, ಅರಣ್ಯ ಇಲಾಖೆ ತಂಡ , ನ್ಯಾಯವಾದಿಗಳ ತಂಡ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ತಂಡ, ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರ ತಂಡ ಮತ್ತು ಮುದ್ರಣ ಮಾಧ್ಯಮ ಪತ್ರಕರ್ತರ ತಂಡಗಳು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದರು.