ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಶೇ.77.44 ಮತದಾನ

Update: 2024-04-26 17:01 GMT

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಮತದಾನದಲ್ಲಿ ಶೇ. 77.44 ಮತದಾನವಾಗಿದ್ದು, ಕೆಲವೆಡೆ ಇವಿಎಂನಲ್ಲಿ ದೋಷ, ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 77.99 ಮತದಾನವಾಗಿತ್ತು.

ಬೆಳ್ತಂಗಡಿಯ ಬಾಂಜಾರುಮಲೆ ಮತಗಟ್ಟೆಯಲ್ಲಿ ಶೇ. 100 ಮತದಾನದ ಮೂಲಕ ದಾಖಲೆ ನಿರ್ಮಾಣವಾಗಿದ್ದರೆ, ಸುಳ್ಯ, ಪುತ್ತೂರಿನ ಗ್ರಾಮೀಣ ಭಾಗದ ಮತಗಟ್ಟೆಗಳಲ್ಲಿ ಉತ್ತಮ ಮತದಾನವಾಗಿದೆ. ಈ ಬಾರಿಯೂ ಮಂಗಳೂರು ನಗರ ಉತ್ತರ, ದಕ್ಷಿಣ ಸೇರಿದಂತೆ ನಗರ ಪ್ರದೇಶಗಳಲ್ಲಿ ಮತದಾನ ಕುಂಠಿತವಾಗಿದೆ. ಕಪಿತಾನಿಯೊ ಶಾಲೆಯ ಮತಗಟ್ಟೆ ಹೊರ ಆವರಣದಲ್ಲಿ ಪೊಲೀಸರು, ಮಾಧ್ಯಮ ಪ್ರತಿನಿಧಿಗಳ ಜತೆ ಬಿಜೆಪಿ ಕಾರ್ಯಕರ್ತರ ವಾಗ್ವಾದ, ಬಂಟ್ವಾಳದ ಕರೋಪಾಡಿ ಹಾಗೂ ಬಿಜೈನ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯ ಮತಗಟ್ಟೆಗಳಲ್ಲಿ ಲ್ಲಿ ಮತದಾನ ಆರಂಭದ ವೇಳೆ ಇವಿಎಂನಲ್ಲಿ ದೋಷ, ಮುಲ್ಕಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ತಪ್ಪು ಬೆರಳಿಗೆ ಶಾಹಿ ಹಾಕಿರುವುದು, ಸುಳ್ಯದ ಬಿಳಿನೆಲೆಯ ಮತಗಟ್ಟೆಯ ಎದುರು ಕಾಂಗ್ರೆಸ್- ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಮತಗಟ್ಟೆಯಲ್ಲಿ ಮತದಾರರು ಶಾಂತಿಯುತವಾಗಿ ಸರತಿ ಸಾಲಿನಲ್ಲಿ ನಿಂತು ಬಿಸಿಲ ಬೇಗೆಯ ನಡುವೆಯೂ ಮತ ಚಲಾಯಿಸಿದರು.

ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್

ಸುಳ್ಯದ ಬಿಳಿನೆಲೆ, ಕೊಂಬಾರು, ಕೈಕಂಬ ಸೇರಿದಂತೆ ಒಟ್ಟು 13 ಸೂಕ್ಷ್ಮಮತಗಟ್ಟೆಗಳಲ್ಲಿ ಆರ್‌ಪಿಎಸ್‌ಎಫ್ (ರೈಲ್ವೇ ವಿಶೇಷ ರಕ್ಷಣಾ ಪಡೆ) ಕಮಾಂಡೋಗಳಿಂದ ವಿಶೇಷ ಭದ್ರತೆ ಒದಗಿಸಲಾಗಿತ್ತು.ಈ ಮತಗಟ್ಟೆಗಳಿಗೆ ತಲಾ 4ರಂತೆ ಆರ್‌ಪಿಎಸ್‌ಎಫ್ ಕಮಾಂಡೋಗಳು, ಪೊಲೀಸರು, ಹೋಂಗಾರ್ಡ್ ಗಳಿಂದ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಈ ವ್ಯಾಪ್ತಿಯಲ್ಲಿ ಮತದಾರರು ಯಾವುದೇ ಆತಂಕವಿಲ್ಲದೆ ಸಂಜೆಯವರೆಗೂ ಉತ್ಸಾಹದಿಂದ ಮತದಾನ ಮಾಡಿರುವುದು ಕಂಡು ಬಂದಿದೆ.

ಬಿರು ಬಿಸಿಲಿಗೆ ನೀರಸ ಮತದಾನ

ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗೆ 6.30ರ ವೇಳೆಗೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನಕ್ಕೆ ಮುಂದಾಗಿದ್ದರೆ, ಬಿರು ಬಿಸಿಲು ಹೆಚ್ತಾಗುತ್ತಿರುವಂತೆಯೇ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆಯೂ ಇಳಿಕೆಯಾಗಿತ್ತು. ಕೆಲವೊಂದು ಮತಗಟ್ಟೆಗಳಲ್ಲಿ ಮತದಾರರೇ ಕಾಣಿಸಲಿಲ್ಲ. ಮತ್ತೆ ಸಂಜೆ 3ರಿಂದ ುತಗಟ್ಟೆಗಳಲ್ಲಿ ಸರತಿ ಸಾಲು ಕಂಡು ಬಂತು. ಕೆಲವೆಡೆ ಗಂಟೆಗಟ್ಟಲೆ ಮತದಾನಕ್ಕಾಗಿ ಕಾಯಬೇಕಾದ ಪರಿಸ್ಥಿತಿಯೂ ಇದರಿಂದಾಗಿ ಉದ್ಭವವಾಗಿತ್ತು.

ಪ್ರಥಮ ಚಿಕಿತ್ಸಾ ವ್ಯವಸ್ಥೆ: ನೆರಳಿಗಾಗಿ ಶಾಮಿಯಾನ

ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಹೀಟ್ ಸ್ಟ್ರೋಕ್ ಸೇರಿದಂತೆ ಮತದಾರರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡು ಬಂದರೆ ತುರ್ತು ಚಿಕಿತ್ಸೆಗೆ ಪ್ರಥಮ ಚಿಕಿತ್ಸಾ ವ್ಯವಸ್ಥೆ ಒದಗಿಸಲಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ನೆರಳಿಗಾಗಿ ಶಾಮಿಯಾನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವೀಲ್ ಚೇರ್ ವ್ಯವಸ್ಥೆಯೂ ಕಂಡು ಬಂತು.

ಇವಿಎಂನಲ್ಲಿ ದೋಷ

ಪುತ್ತೂರಿನ ಸುಧಾನ ಶಾಲೆಯ ಮತಗಟ್ಟೆಯಲ್ಲಿ ಮತದಾನದ ಆರಂಭದ ವೇಳೆ ಇವಿಎಂನಲ್ಲಿ ದೋಷ ಕಂಡು ಬಂದಿತ್ತು. ತಕ್ಷಣ ತಹಶೀಲ್ದಾರ್, ಎಸಿಯನ್ನು ಕರೆಸಿ ಇವಿಎಂ ಆಫ್ ಮಾಡಿ ಆನ್ ಮಾಡಿದಾಗ ಇವಿಎಂ ಕಾರ್ಯಾರಂಭಿಸಿದ್ದು, ಬಳಿಕ ಮತದಾನ ಆರಂಭಿಸಲಾಯಿತು. ದೋಷ ಕಂಡು ಬಂದ ಕಾರಣ ಸುಮಾರು 20 ನಿಮಿಷ ಮತದಾನ ಪ್ರಕ್ರಿಯೆ ವಿಳಂಬವಾ ಯಿತು ಎಂದು ಮತಗಟ್ಟೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಿಜೈನ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಆರಂಭದ ವೇಳೆ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಬಳಿಕ ತಜ್ಞರನ್ನು ಕರೆಸಿ ಮತದಾನ ಪ್ರಕ್ರಿಯೆ ಆರಂಭಿಸಲಾಗಿತ್ತು ಎಂದು ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಸ್ವಯಂ ಪ್ರೇರಿತ ಮತದಾನ

ಹಿಂದೆಲ್ಲ ಮತದಾನಕ್ಕೆ ಪಕ್ಷಗಳ ನೇತೃತ್ವದಲ್ಲಿ ಮತಗಟ್ಟೆಗೆ ಮತದಾರರನ್ನು ವಾಹನಗಳಲ್ಲಿ ಕರೆ ತರುವುದು ಸಾಮಾನ್ಯ ವಾಗಿತ್ತು. ಆದರೆ ಕಳೆದ ವಿಧಾನ ಸಭೆಯಂತೆ ಲೋಕಸಭೆಯಲ್ಲೂ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶವಿದ್ದ ಕಾರಣ ಪಕ್ಷದಿಂದ ವಾಹನ ವ್ಯವಸ್ಥೆ ವಿರಳವಾಗಿತ್ತು.

ಗ್ರಾಮೀಣ ಭಾಗದಲ್ಲಿ ಉತ್ತಮ ಮತದಾನ

ಶುಕ್ರವಾರ ನಡೆದ ಮತದಾನದಲ್ಲಿ ನಗರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಮತದಾನ ನಡೆದಿದೆ. ಮೂಲಭೂತ ಸೌಕರ್ಯಗಳಿಂದ ವಂಚತವಾಗಿದ್ದರೂ ಮತದಾರರು ಮಾತ್ರ ಅತ್ಯಂತ ಉತ್ಸಾಹದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರುವುದು ಈ ಬಾರಿಯ ಚುನಾವಣೆಯಲ್ಲಿಯೂ ಕಂಡು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಜೆ 5 ಗಂಟೆ ವೇಳೆಗೆ 71.83 ಮತದಾನವಾಗಿದ್ದು, ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 61.81, ಉತ್ರರದಲ್ಲಿ 69.75 ಮತದಾನವಾಗಿದೆ. ಗ್ರಾಮೀಣ ಭಾಗವಾದ ಮಂಗಳೂರು 73.45, ಮೂಡುಬಿದಿರೆ 68.62, ಬಂಟ್ವಾಳ 73.69, ಪುತ್ತೂರು 75.02, ಬೆಳ್ತಂಗಡಿ 75.59, ಸುಳ್ಯ 78.35 ಮತದಾನವಾಗಿತ್ತು.

ಗ್ಯಾರಂಟಿಯಿಂದ ಸಾಲ ತೀರಿಸಿದ ಖುಷಿ!

ಪುತ್ತೂರು ಸುಧನಾ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರ ಬಂದ ಹಿರಿಯ ನಾಗರಿಕ ಮಹಿಳೆಯೊಬ್ಬರನ್ನು ಮಾತನಾಡಿಸಿದಾಗ, ‘‘ನನಗೆ ಕಳೆದ 10 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿತ್ತು. ಅದರಲ್ಲಿ ನನ್ನ 30,000 ರೂ. ಸಾಲದಲ್ಲಿ, 20000 ರೂ.ಗಳನ್ನು ತೀರಿಸಲು ಸಾಧ್ಯವಾಗಿದೆ. ಬಾಕಿ ಉಳಿದಿರುವ ಸಾಲವನ್ನು ಮುಂದಿನ ಐದು ತಿಂಗಳಲ್ಲಿ ತೀರಿಸಲಿದ್ದೇನೆ. ಗ್ಯಾರಂಟಿ ಯೋಜನೆ ನಮ್ಮಂತಹ ಬಡವರಿಗೆ ವರದಾನ’ ಎಂದರು.

ಮೂಲತ: ಪುತ್ತೂರಿನವರಾದ ಮಹಿಳೆಯೊಬ್ಬರು ಪ್ರಸ್ತುತ ಸುರತ್ಕಲ್‌ನಲ್ಲಿ ಬಾಡಿಗೆ ಮನೆಯಲ್ಲಿ ತಮ್ಮ ಕುಟುಂಬ ಸಹಿತ ವಾಸವಾಗಿದ್ದು, ಮತದಾನಕ್ಕಾಗಿ ಪುತ್ತೂರಿನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಅವರನ್ನು ಮಾತನಾಡಿಸಿ ದಾಗ, ‘ಪತಿಯನ್ನು ಕಳೆದುಕೊಂಡು ಮಕ್ಕಳೂ ಅಸಹಾಯಕರಾಗಿ ಜೀವಿಸುವ ವಯೋವೃದ್ಧ ಮಹಿಳೆಯರಿಗೆ ಸರಕಾರದಿಂದ ಗ್ಯಾರಂಟಿ ಯೋಜನೆ ಅಗತ್ಯವಿದೆ’ ಎಂಬ ಬೇಡಿಕೆಯನ್ನಿಟ್ಟರು.

ಚಪಾತಿ ಸಿಕ್ಕಿಲ್ಲ, ಅನ್ನ ಸಾಂಬಾರ್ ಒಕೆ!

‘ಆರ್‌ಪಿಎಸ್‌ಎಫ್‌ನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವುದು ವಿಭಿನ್ನ ಅನುಭವ. ಅದು ಕಾಡಿನ ನಡು ವಿನ ಕರ್ತವ್ಯ. ಆದರೆ ಚುನಾವಣೆ ಸಂದರ್ಭಗಳಲ್ಲಿ ಇಂತಹ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರ ನಡುವೆ ಕರ್ತವ್ಯ ನಿರ್ವಹಿಸಲು ಅವಕಾಶ ಸಿಗುತ್ತದೆ. ದ.ಕ. ಜಿಲ್ಲೆಗೆ ಇದು ಪ್ರಥಮ ಭೇಟಿ. ಇಲ್ಲಿ ಬಿಸಿಲು ಜೋರಾಗಿದೆ. ಇಲ್ಲಿನ ಜನರ ಭಾಷೆ ಅರ್ಥವಾಗುವುದಿಲ್ಲ, ಅದು ಬಿಟ್ಟರೆ ಬೇರೆನೂ ಸಮಸ್ಯೆ ಇಲ್ಲ. ಬಿಸಿಲು ಮಾತ್ರ ಜೋರಾಗಿದೆ. ನಾನು ಮೂಲತ: ಹರಿಯಾನ. ನಾವು ಜಾಸ್ತಿ ಚಪಾತಿ ತಿನ್ನುವುದು. ಆದರೆ ಇಲ್ಲಿ ಅನ್ನ, ಸಾಂಬಾರು ಚೆನ್ನಾಗಿದೆ. ತಮಿಳುನಾಡಿನಲ್ಲಿ ಮೊದಲ ಹಂತದ ಚುನಾವಣೆಯ ಕರ್ತವ್ಯ ನಿರ್ವಹಿಸಿ, ಎ. 21ರಂದು ದ.ಕ. ಜಿಲ್ಲೆಗೆ ನಮ್ಮ ತಂಡ ಆಗಮಿಸಿದೆ. ಇಲ್ಲಿನ ಕರ್ತವ್ಯದ ಬಳಿಕ ಮತ್ತೆ ತಮಿಳುನಾಡಿನ ದ್ವಿತೀಯ ಹಂತದ ಚುನಾವಣೆಗೆ ತೆರಳಲಿದ್ದೇವೆ’ ಎಂದು ಸುಳ್ಯದ ಸುಂಕದ ಕಟ್ಟೆಯ ಸೂಕ್ಷ್ಮ ಮತಗಟ್ಟೆಯಲ್ಲಿ ಕರ್ತವ್ಯ ನಿರತರಾಗಿದ್ದ ಆರ್‌ಪಿಎಸ್‌ಎಫ್‌ನ ಕಮಾಂಡೋ ನರೇಂದ್ರ ಕುಮಾರನ್ ಪ್ರತಿಕ್ರಿಯಿಸಿದ್ದಾರೆ.

ಇವಿಎಂಗಳಲ್ಲಿ ಭದ್ರ 9 ಅಭ್ಯರ್ಥಿಗಳ ಭವಿಷ್ಯ

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಒಂಭತ್ತು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯ ಮತದಾರರು ನಿರ್ಧರಿಸಿಯಾಗಿದ್ದು, ಅದು ಇವಿಎಂಗಳಲ್ಲಿ ಭದ್ರವಾಗಿದೆ.

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪದ್ಮರಾಜ್ ಆರ್. ಪೂಜಾರಿ ಹಾಗೂ ಬಿಜೆಪಿಯ ಬ್ರಿಜೇಶ್ ಚೌಟ ಅವರ ನಡುವೆ ನೇರಾ ನೇರ ಸ್ಪರ್ಧೆಯಿದ್ದು, ಉಳಿದಂತೆ, ದುರ್ಗಾಪ್ರಸಾದ್- ಕರುನಾಡ ಸೇವಾ ಪಾರ್ಟಿ, ಕಾಂತಪ್ಪ ಅಲಂಗಾರ್- ಬಿಎಸ್ಪಿ, ಪ್ರಜಾಕೀಯ ಮನೋಹರ- ಉತ್ತಮ ಪ್ರಜಾಕೀಯ ಪಾರ್ಟಿ, ರಂಜಿನಿ ಎಂ.- ಕರ್ನಾಟಕ ರಾಷ್ಟ್ರ ಸಮಿತಿ, ದೀಪಕ್ ರಾಜೇಶ್ ಕುವೆಲ್ಲೊ, ಮ್ಯಾಕ್ಸಿಂ ಪಿಂಟೊ, ಸುಪ್ರೀತ್ ಕುಮಾರ್ ಪೂಜಾರಿ- ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಬಿರು ಬಿಸಿಲು, ಮದುವೆ, ಗೃಹ ಪ್ರವೇಶ ಸೇರಿದಂತೆ ಖಾಸಗಿ ಕಾರ್ಯಕ್ರಮಗಳ ಭರಾಟೆಯೂ ಹೆಚ್ಚಾಗಿದ್ದ ಕಾರಣ ಮಧ್ಯಾಹ್ನದ ವೇಳೆ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕ್ಷೀಣವಾಗಿತ್ತು. ಇದರಿಂದಾಗಿ ಸಂಜೆಯ ವೇಳೆಗೆ ಮತಗಟ್ಟೆ ಗಳಲ್ಲಿ ಮತ್ತೆ ಸರತಿ ಸಾಲ್ಲಿನಲ್ಲಿ ಗಂಟೆಗಟ್ಟಲೆ ಮತದಾರರು ಕೆಲವೆಡೆ ಕಾಯಬೇಕಾದ ಪ್ರಸಂಗ ನಿರ್ಮಾಣವಾಗಿತ್ತು. ಆರು ಗಂಟೆಗೆ ಮೊದಲು ಆಗಮಿಸಿ, ಸರದಿಯಲ್ಲಿ ನಿಂತತವರಿಗೆ ಟೋಕನ್ ನೀಡಿ, ಸರದಿ ಮುಗಿಯುವ ತನಕ ಮತದಾನಕ್ಕೆ ಅವಕಾಶ ನೀಡಲಾಯಿತು.

ಸಾಮಾನ್ಯ ಮತದಾರರ ಜತೆ ವಿಶೇಷ ಚೇತನರು, ಅಸಹಾಯಕರು, ವಯೋವೃದ್ಧರು ಮತದಾನ ಮಾಡಿದರು. ಕೆಲವೆಡೆ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿ, ಮತದಾನ ಮಾಡಲು ಆಗದಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.

ಕರಾವಳಿಯಲ್ಲಿ ಶುಕ್ರವಾರ ಸಾಕಷ್ಟು ಸಂಖ್ಯೆಯಲ್ಲಿ ಮದುವೆ ಸಮಾರಂಭಗಳಿದ್ದವು. ವಧು ವರರು ಹಸೆಮಣೆಯಿಂದ ನೇರವಾಗಿ ಬಂದು ಮತದಾನ ಮಾಡಿದ ಪ್ರಸಂಗಗಳೂ ವರದಿಯಾಗಿದೆ. ಇದರಿಂದ ಮತದಾನ ಕೇಂದ್ರ ಆಕರ್ಷಣೆ ಕೇಂದ್ರವಾಗಿತ್ತು.

ದ.ಕ. ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆಯಲ್ಲಿ 11,255 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲೆಯ ಒಟ್ಟು 1876 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಗುರುವಾರ ಮಸ್ಟರಿಂಗ್ ನಡೆದ ಬಳಿಕ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಸಾಮಗ್ರಿಗಳಾದ ಇವಿಎಂ, ವಿವಿಪ್ಯಾಟ್‌ಗಳ ಜತೆಗೆ ನಮೂನೆ ಹಾಗೂ ಲಕೋಟೆಗಳೊಂದಿಗೆ ತೆರಳಿದ್ದರು. ರಾತ್ರಿ ಮತದಾನ ಕೇಂದ್ರದಲ್ಲೇ ಉಳಿದಿದ್ದರು. ರಾಜಕೀಯ ಪಕ್ಷಗಳ ಏಜೆಂಟರೂ ಮತಗಟ್ಟೆಗಳಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 40 ಸಖಿ ಮತಗಟ್ಟೆ, ಎಂಟು ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆ, ಎಂಟು ಯುವ ಮತದಾರರ ಮತಗಟ್ಟೆ, ಎಂಟು ಮಿಷನ್ ಬೇಸ್ಡ್ ಮತ್ತು ಎಂಟು ಪಾರಂಪರಿಕ ಮತಗಟ್ಟೆ ಸೇರಿದಂತೆ ಒಟ್ಟು 72 ಮತಗಟ್ಟೆಗಳನ್ನು ಆಕರ್ಷಕವಾಗಿ ಸ್ಥಾಪಿಸಲಾಗಿತ್ತು.

ಶಿಕ್ಷಣ, ಮೂಲಭೂತ ಸೌಕರ್ಯಗಳ ಬಗ್ಗೆ ಯುವ ಮತದಾರರ ಬೇಡಿಕೆ

ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವದು ಕಂಡು ಬಂದಿದೆ. ಮಾಣಿಯ ದ.ಕ.ಜಿಪಂ ಹಿ.ಪ್ರಾ. ಶಾಲೆಯ ಮತಗಟ್ಟೆಗೆ ಮತಚಲಾಯಿಸಲು ಆಗಮಿಸಿದ್ದ ದ್ವಿತೀಯ ಬಿಕಾಂನ ವಿದ್ಯಾರ್ಥಿನಿ ಯಕ್ಷಿತ ಅವರಲ್ಲಿ, ಈ ಬಾರಿ ಚುನಾವಣೆಯ ಮೂಲಕ ಜನಪ್ರತಿನಿಧಿಗಳಿಂದ ಏನು ನಿರೀಕ್ಷಿಸುತ್ತೀರಿ ಎಂದು ಪ್ರಶ್ನಿಸಿದರೆ, ಜನರಿಗೆ ಒಳ್ಳೆಯದಾಗುವ ಕೆಲಸವನ್ನು ಆಯ್ಕೆಯಾದ ಅಭ್ಯರ್ಥಿಗಳು ಮಾಡಬೇಕು. ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡುವುದಲ್ಲದೆ, ಸ್ಥಳೀಯವಾಗಿ ಉದ್ಯೋಗ ಸಿಗುವಂತಾಗಬೇಕು ಎಂದರು.

ಶಾಝಿನ್ ಹುಸೇನ್ ಎಂಬ ಯುವ ಮತದಾರ, ಯುವಕರಿಗೆ ಬೇಕಿರುವುದು ಉತ್ತಮ ಶಿಕ್ಷಣದ ಜತೆಗೆ ಮೂಲಭೂತ ಸೌಕರ್ಯಗಳು, ಉದ್ಯೋಗಾವಕಾಶ. ಅದಕ್ಕೆ ಸರಕಾರ ಒತ್ತು ನೀಡಬೇಕು ಎಂದು ಅಭಿಪ್ರಾಯಿಸಿದರು.

ಕಲ್ಲಡ್ಕ ಮತಗಟ್ಟೆಯ ಬಳಿ, ಪ್ರಥಮ ಬಾರಿಗೆ ಮತ ಚಲಾಯಿಸುವ ಉತ್ಸಾಹದಲ್ಲಿದ್ದ ಅನಿರೀಕ್ಷಿತ ಅವರನ್ನು ಮಾತನಾಡಿಸಿ ದಾಗ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು. ರಸ್ತೆಗಳನ್ನು ಉತ್ತಪಡಿಸಬೇಕು ಎಂದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News