1.20 ಲಕ್ಷ ಮತಗಳ ಅಂತರದಿಂದ ಗೆಲುವು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ವಿಶ್ವಾಸ

Update: 2024-04-27 13:25 GMT

ಮಂಗಳೂರು: ದ.ಕ. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ 1.20 ಲಕ್ಷ ಮತಗಳ ಅಂತರದಿಂದ ಜಯಗಳಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರ ಕಾರ್ಯದಲ್ಲಿ ಸಹಕರಿಸಿದ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

ಚುನಾವಣೆಯ ದಿನದಂದು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಮತದಾರರ ಉತ್ಸಾಹ, ಸ್ಪಂದನೆ ಕಂಡು ಆತ್ಮವಿಶ್ವಾಸ ಹೆಚ್ಚಿದೆ. ಮತದಾನ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕಿತ್ತು. ಆದರೆ ದ.ಕ. ಜಿಲ್ಲೆಯಲ್ಲಿ ಉತ್ತಮ ಮತದಾನ ಆಗಿದೆ. ಕಾರ್ಯಕರ್ತರ ಆಶಯ, ಮತದಾರರು ಬದಲಾವಣೆ ಬಯಸಿರುವುದು ಜೂ. 4ರಂದು ಫಲಿತಾಂಶದ ದಿನ ತಿಳಿಯಲಿದೆ ಎಂದವರು ಹೇಳಿದರು.

ಜಿಲ್ಲೆಯ ಅಭಿವೃದ್ಧಿ, ನೈಜ ವಿಚಾರವನ್ನು ಜನತೆಯ ಮುಂದಿಟ್ಟು ಪ್ರಚಾರ ಕಾರ್ಯ ನಡೆಸಿದ್ದು, ಪಕ್ಷದ ನಾಯಕರು, ಕಾರ್ಯಕರ್ತರು ಕುಟುಂಬವಾಗಿ ಚುನಾವಣೆ ಎದುರಿಸಿದ್ದೇವೆ. ಪ್ರತಿಯೊಬ್ಬರೂ ನನ್ನ ಜತೆ ಸಹಕರಿಸಿದ್ದು, ಎದುರಾಳಿಗಳ ದ್ವೇಷಕ್ಕೆ ಪ್ರತಿಯಾಗಿ ಪ್ರೀತಿಯಿಂದ ಮತದಾರರ ಮನವೊಲಿಸುವ ಕಾರ್ಯ ಮಾಡಲಾಗಿದೆ. ಕಾಂಗ್ರೆಸ್ ಈ ಹಿಂದೆ ಮಾಡಿರುವ ಅಭಿವೃದ್ಧಿ ಯೋಜನೆ, ಗ್ಯಾರಂಟಿ ಯೋಜನೆಗಳ ಮಾಹಿತಿ ಮನೆ ಮನೆಗೆ ತಲುಪಿಸುವ ಮೂಲಕ ಪ್ರೀತಿ ಹಂಚಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿಯವರು ಒಂದೂವರೆ ಲಕ್ಷದಿಂದ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಯಾರೂ ಸೋಲಲು ಸಿದ್ಧ ಇರುವುದಿಲ್ಲ. ಗೆಲ್ಲುವುದಕ್ಕಾಗಿಯೇ ಸ್ಪರ್ಧೆ ಮಾಡಿರುವುದು. ಆದರೆ ಬಿಜೆಪಿಯವರು ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ನಾವು ಇಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎಂದು ಈ ಹಿಂದೆ ಎಲ್ಲಿಯೂ ಹೇಳಿಲ್ಲ. ಜೂ. 4ರವರೆಗೆ ಎಲ್ಲರೂ ಸಂತೋಷದಿಂದ ಫಲಿತಾಂಶವನ್ನು ಎದುರು ನೋಡೋಣ ಎಂದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಮನೆ ಬೆಳಗುವ ಜತೆಗೆ, ಕುಟುಂಬಗಳಲ್ಲಿ ಆತ್ಮಸ್ಥೈರ್ಯ ತುಂಬಲಿದೆ. ಇದು ನಮ್ಮ ಗೆಲುವಿಗೆ ಮುಖ್ಯ ಕಾರಣವಾಗಲಿದೆ ಎಂದು ಹೇಳಿದ ಪದ್ಮರಾಜ್, ಕಳೆದ 35 ವರ್ಷಗಳಿಂದೀಚಿಗಿನ ಅಭಿವೃದ್ಧಿ ಹಾಗೂ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಯಲ್ಲಾದ ಅಭಿವೃದ್ಧಿ ಬಗ್ಗೆ ಮತದಾರರಿಂದ ತುಲನೆಯೂ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದರು.

ಕಾಂಗ್ರೆಸ್ ಈ ಹಿಂದೆಯಾಗಲಿ ಈ ಬಾರಿಯಾಗಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಎದುರಿಸಿಲ್ಲ. ಅಭಿವೃದ್ಧಿ ವಿಚಾರಗಳು ಈ ಬಾರಿ ಚರ್ಚೆಯಾಗಿವೆ. ನಾನು ಯಾವತ್ತೂ ಜಾತಿ ಹೆಸರಿನಲ್ಲಿ ಮತ ಕೇಳಿಲ್ಲ. ಬದಲಾಗಿ ಆರ್ಥಿಕವಾಗಿ ಹಿಂದುಳಿ ವರ್ಗಗಳ ಶಕ್ತಿಯಾಗಿ ಕಾಂಗ್ರೆಸ್ ಗೆಲುವಿಗೆ ಸಹಕರಿಸುವಂತೆ ಮತದಾರರನ್ನು ಮನವಿ ಮಾಡಿದ್ದೇನೆ. ಅದಕ್ಕವರು ಸ್ಪಂದಿಸಿರುವ ವಿಶ್ವಾಸವಿದೆ ಎಂದವರು ಹೇಳಿದರು.

ಮುಂದಿನ ದಿನಗಳಲ್ಲಿ ಪಕ್ಷವನ್ನು ಯಾವ ರೀತಿ ಸಂಘಟಿಸಲಿದ್ದೀರಿ ಎಂಬ ಪ್ರಶ್ನೆಗೆ, ನಾನು ನಿನ್ನೆ ಮತದಾನದ ವೇಳೆ ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲೂ ಕಾರ್ಯಕರ್ತರಲ್ಲಿ ಇದು ಅಂತ್ಯ ಅಲ್ಲ, ಆರಂಭ ಎಂದು ಧೈರ್ಯ ತುಂಬಿದ್ದೇನೆ. ಚುನಾವಣೆಯ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಲ್ಲಿ ಪ್ರಚಾರ ಕಾರ್ಯ ನಡೆಸಿದ್ದು, ಇದೀಗ ಆರೇಳು ದಿನಗಳ ವಿಶ್ರಾಂತಿಯ ಅಗತ್ಯವಿದೆ. ಬಳಿಕ ನಮ್ಮ ನಾಯಕರ ನೇತೃತ್ವದಲ್ಲಿ ಬ್ಲಾಕ್ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡುವ ಕೆಲಸವನ್ನು ಮಾಡಲಿದ್ದೇನೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಸಾಮರಸ್ಯದ ಎಂದು ಪದ್ಮರಾಜ್ ಉತ್ತರಿಸಿದರು.

ಗೋಷ್ಟಿಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ ಜೈನ್, ಶಶಿಧರ ಹೆಗ್ಡೆ, ಶುಭೋದಯ ಆಳ್ವ, ಮುಹಮ್ಮದ್ ಉಪಸ್ಥಿತರಿದ್ದರು.

ಪದ್ಮರಾಜ್ ಯಾವತ್ತೂ ಕಾಂಗ್ರೆಸ್‌ನ ಹಿರಿಯ ನಾಯಕರಾದ ಜನಾರ್ದನ ಪೂಜಾರಿ ಅವರನ್ನು ಪಕ್ಷದ ಟಿಕೆಟ್‌ಗಾಗಿ ಅಥವಾ ತನ್ನ ಸ್ವಾರ್ಥಕ್ಕಾಗಿ ಬಳಸಿಲ್ಲ. ಅವರು ಕೇಂದ್ರ ಸಚಿವರಾಗಿ ದೇಶ, ಜನತೆಗೆ ನೀಡಿರುವ ಕೊಡುಗೆಯ ಬಗ್ಗೆ ಗೌರವ, ಕಾಳಜಿ ಯೊಂದಿಗೆ ನಾನು ಸ್ಪಂದಿಸುತ್ತಾ ಬಂದಿದ್ದೇನೆ. ಅವರು ತಮ್ಮ ಮನೆಗೆ, ತಮ್ಮ ಬಳಿಗೆ ಬಂದ ಎಲ್ಲರನ್ನೂ ತುಳುನಾಡಿನ ಸಂಸ್ಕೃತಿಯಂತೆ ಗೌರವಿಸಿದ್ದಾರೆ, ಆಶೀರ್ವದಿಸಿದ್ದಾರೆ. ಇದಲ್ಲೇನು ಬೇರೆ ಅರ್ಥ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News