ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ : ಡಿ.ಕೆ.ಶಿವಕುಮಾರ್
ಮಂಗಳೂರು : ಕರಾವಳಿ ಕರ್ನಾಟಕದ ಪ್ರವಾಸೋದ್ಯಮವನ್ನು ಕೇರಳ ಮತ್ತು ಗೋವಾ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಅವರು ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಯ ವಿಷಯದಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿವೆ. ಮಂಗಳೂರಿನ ಜನರು ಉದ್ಯೋಗಕ್ಕಾಗಿ ಮುಂಬೈ, ದುಬೈ ಮತ್ತು ಬೆಂಗಳೂರಿಗೆ ವಲಸೆ ಹೋಗುತ್ತಾರೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ನಾನು ಈ ಪ್ರದೇಶದ ಎಲ್ಲಾ ಶಾಸಕರೊಂದಿಗೆ ಮಾತನಾಡಿದ್ದೇನೆ. ಅವರು ಪ್ರವಾಸೋದ್ಯಮದ ಉತ್ತೇಜನದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಪ್ರವಾಸೋದ್ಯಮ ನೀತಿಯ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಅವಶ್ಯಕತೆಯಿದೆ. ವಿದೇಶ, ಮುಂಬೈ ಮತ್ತು ಬೆಂಗಳೂರಿನಿಂದ ಅನೇಕರು ತಮ್ಮ ಊರಿಗೆ ಮರಳಲು ಮತ್ತು ಅಭಿವೃದ್ಧಿಗಾಗಿ ಈ ಪ್ರದೇಶದಲ್ಲಿ ಹೂಡಿಕೆ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೂಡಿಕೆಯು ಕೌಶಲ್ಯ ಮತ್ತು ಪ್ರತಿಭಾನ್ವಿತ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಬದಲು, ಸ್ಥಳೀಯವಾಗಿ ಉದ್ಯೋಗವನ್ನು ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ನಾವು ಚರ್ಚೆ ನಡೆಸುತ್ತೇವೆ. "ಈಗ ಇರುವ ಸಮಸ್ಯೆಗಳನ್ನು ಮತ್ತು ಹೂಡಿಕೆ ಮಾಡಲು ಸಿದ್ಧರಿರುವ ಉದ್ಯಮಿಗಳಿಗೆ ಸರ್ಕಾರವು ಹೇಗೆ ಬೆಂಬಲ ನೀಡಬಹುದು ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಖಾಸಗಿ ಸಹಭಾಗಿತ್ವವೂ ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದರು.
ಉದ್ಯಮಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸಹಕರಿಸಬೇಕು. ಪ್ರವಾಸೋದ್ಯಮ ಸಮಾವೇಶದಲ್ಲಿ ಸಿಆರ್‌ಝಡ್ ಅಧಿಕಾರಿಗಳು, ರಕ್ಷಣಾ ಮತ್ತು ಕರಾವಳಿ ಪೊಲೀಸರು ಸಹ ಭಾಗವಹಿಸುತ್ತಾರೆ. ಇಲ್ಲಿ ಒಂದೇ ಒಂದು ಪಂಚತಾರಾ ಹೋಟೆಲ್ ಇಲ್ಲ. ಎಲ್ಲವನ್ನೂ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಅವರು ಹೇಳಿದರು.
Box
ಕೇಂದ್ರ ಸರಕಾರ ಮನರೇಗಾ ಹೆಸರು ಬದಲಾವಣೆ ಮತ್ತು ಕಾನೂನು ತಿದ್ದುಪಡಿ ವಿರುದ್ಧ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವತಿಯಿಂದ ಜನವರಿ 26 ರಿಂದ 5 ರಿಂದ 10 ಕಿಲೋ ಮೀಟರ್ ಪಾದಯಾತ್ರೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆಶಿ ತಿಳಿಸಿದರು.