ನರಿಂಗಾನ ಲವ-ಕುಶ ಕಂಬಳೋತ್ಸವ ಉದ್ಘಾಟನೆ
ಕಂಬಳ ಕರಾವಳಿಯ ಜೀವಾಳವೇ ಆಗಿದೆ : ಡಾ.ಎಂ.ಮೋಹನ್ ಆಳ್ವ
ಕೊಣಾಜೆ: ಇಂದು ಕರಾವಳಿ ಕರ್ನಾಟಕ್ಕೆ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ವಿಶೇಷ ಗೌರವವಿದೆ. ಕರಾವಳಿ ಕರ್ನಾಟಕದ ಅಸ್ಮಿತೆಗೆ ಸಾಕ್ಷಿಯಾದ ಯಕ್ಷಗಾನ, ದೈವಾರಾಧನೆ ಹಾಗೂ ನಾಗಾರಾಧನೆ ಕರಾವಳಿಯ ವಿಶಿಷ್ಟ ಪರಂಪರೆಗೆ ಸಾಕ್ಷಿಯಾಗಿದ್ದು, ಇದು ಧಾರ್ಮಿಕವಾಗಿಯೂ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಇನ್ನೊಂದೆಡೆ ಸುದೀರ್ಘ ಇತಿಹಾಸ ಹೊಂದಿರುವ ಕಂಬಳ ಕ್ರೀಡೆ ಕರಾವಳಿಯ ಜೀವಾಳವೇ ಆಗಿದೆ. ಇವೆಲ್ಲದರ ಹೊರತು ಕರಾವಳಿಯನ್ನು ಕಲ್ಪಿಸುವುದೇ ಅಸಾಧ್ಯ ಎಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಅವರು ಹೇಳಿದರು.
ಅವರು ಶನಿವಾರ ನರಿಂಗಾನದಲ್ಲಿ 4 ನೇ ವರ್ಷದ ಲವ- ಕುಶ ಕಂಬಳೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಂಬಳ ಕರಾವಳಿಯ ಕೇವಲ ಒಂದು ಜನಪದ ಕ್ರೀಡೆಯಷ್ಟೇ ಅಲ್ಲ, ಅನೇಕ ವರ್ಷಗಳಿಂದ ನಂಬಿಕೆ, ಶಿಸ್ತಿನೊಂದಿಗೆ ನಡೆಯುತ್ತಾ ಬಂದಿರುವ ಪರಂಪರೆಯಾಗಿದೆ. ಆದ್ದರಿಂದ ಇಂತಹ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಕಂಬಳದ ಹಿಂದೆ ಒಂದು ಧಾರ್ಮಿಕ ಭಾವನೆ ಇದೆ. ಇದು ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ತುಳು ಭಾಷೆ, ಸಂಸ್ಕೃತಿ ಉಳಿಯಬೇಕಾದರೆ ಇಂತಹ ಕಾರ್ಯಗಳು ಆಗಬೇಕು, ತುಳುವಿಗೆ ಮಾನ್ಯತೆ ಸಿಗಬೇಕು ಎಂದರು.
ಕಂಬಳದ ಹಿರಿಯ ವಿಶ್ಲೇಷಕರಾದ ಗುಣಪಾಲ್ ಕಡಂಬ ಅವರು ಮಾತನಾಡಿ, ಯಾವುದೇ ಜಾತಿಮತ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ನೋಡುವ ಒಂದು ಜಾನಪದೀಯ ಕ್ರೀಡೆ ಎಂದರೆ ಅದು ಕಂಬಳವಾಗಿದೆ. ಆದ್ದರಿಂದ ಎಲ್ಲರೂ ಪ್ರೋತ್ಸಾಹಿಸಿ ಬೆಳೆಸೋಣ ಎಂದರು.
ವಿಧಾನ ಸಭಾ ಅಧ್ಯಕ್ಷರು ಮತ್ತು ನರಿಂಗಾನ ಕಂಬಳ ಸಮಿತಿ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಗೌರವಾಧ್ಯಕ್ಷರಾದ ಮಿತ್ತಕೋಡಿ ವೆಂಕಪ್ಪ ಕಾಜವ, ನರಿಂಗಾನ ಬೋಲ ಚರ್ಚ್ ನ ಧರ್ಮಗುರು ಪೀಟರ್ ಸಲ್ದಾನ, ತಲಪಾಡಿ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್ , ಗಡಿಕಾರರಾದ ಪ್ರಮೋದ್ ಕುಮಾರ್ ರೈ, ಗುಣಕರ ಯಾನೆ ರಾಮ ರೈ, ಚಂದ್ರಹಾಸ್ ಪೂಂಜ, ಮೂಡದ ಅಧ್ಯಕ್ಣರಾದ ಸದಾಶಿವ ಉಳ್ಳಾಲ, ರಮೇಶ್ ಶೆಟ್ಟಿ ಬೋಳಿಯಾರ್, ಸಚ್ಷಿದಾನಂದ ಶೆಟ್ಟಿ, ಸಜಿಪ ಮಾಗಣೆಯ ಸುಬ್ರಹ್ಮಣ್ಯ ದೇವಸ್ತಾನ ಆಡಳಿತ ಮೊಕ್ತೇಸರ ವೆಂಕಟೇಶ್ ಭಟ್, ಅಣ್ಣಪ್ಪ, ಪಣೋಲಿಬೈಲು ಮುಖ್ಯ ಅರ್ಚಕರಾದ ವಾಸು ಮೂಲ್ಯ, ಮಾಗರಣ್ತಡಿ ಗುತ್ತುವಿನ ಶ್ರೀಕರ ಶೆಟ್ಟಿ, ಚಿತ್ತರಂಜನ ಶೆಟ್ಟಿ, ದಾಮೋದರ ಶೆಟ್ಟಿ, ಪ್ರಕಾಶ್ ಕುಂಪಲ, ಕುತ್ತಾರು ಗುತ್ತುವಿನ ಜಯರಾಮ ಆಳ್ವ, ಪ್ರಸಾದ್ ರೈ ಕಲ್ಲಿಮಾರ್,ಗೋಳಿದಡಿ ಗುತ್ತು, ನರಿಂಗಾನ ಗ್ರಾಮ ಪಂಚಾಯತಿ ಅಧ್ಯಕ್ಷ ನವಾಝ್ ನರಿಂಗಾನ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎ.ಸಿ.ಭಂಡಾರಿ, ಮುಖಂಡರಾದ ವರ್ದಮಾನ್ ಶೆಟ್ಟಿ, ಸುರೇಶ್ ಭಟ್ನಗರ, ಅಮರನಾಥ ಶೆಟ್ಟಿ, ಮಹಮ್ಮದ್ ಮೋನು, ಎನ್ .ಎಸ್. ನಾಸೀರ್ ನಡುಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ, ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಸತೀಶ್ ಪುಂಡಿಕಾಯಿ ನಿರೂಪಿಸಿದರು.