×
Ad

ಆಯುಷ್‌ನಿಂದ ಆನೇಕ ರೋಗಗಳ ನಿಯಂತ್ರಣ, ಚಿಕಿತ್ಸೆ ಸಾಧ್ಯ: ಸಚಿವ ದಿನೇಶ್ ಗುಂಡೂರಾವ್

Update: 2026-01-31 22:33 IST

ಮಂಗಳೂರು, ಜ.31: ಇಂದು ಜಗತ್ತಿನಲ್ಲಿ ಆಲೋಪತಿಗೆ ಬೇಡಿಕೆ ಆವಶ್ಯಕತೆ ಇದ್ದೇ ಇದೆ. ಇದರ ಜೊತೆಗೆ ಆಯುರ್ವೇದ, ಹೋಮಿಯೊಪತಿ, ಯುನಾನಿ ಮತ್ತಿತರ ಆಯುಷ್ ಪದ್ಧತಿಯ ಮೂಲಕ ಆನೇಕ ರೋಗಗಳ ನಿವಾರಣೆ ಮತ್ತು ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ

ನಗರದ ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯುಷ್ ಹಬ್ಬ ಸಮಿತಿ 2026 ವತಿಯಿಂದ ಆಯೋಜಿಸಲಾದ ಎರಡು ದಿನಗಳ ಆಯುಷ್ ಹಬ್ಬ 2026ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆಯುಷ್ ಮೇಳವನ್ನು ಉತ್ತಮವಾಗಿ ಆಯೋಜಿಸಲಾಗಿದೆ.ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಆಯುಷ್‌ಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಆಯುಷ್‌ನಲ್ಲಿ ಉತ್ತಮ ಸಂಶೋಧನೆ ನಡೆದಿದೆ. ಪಾರಂಭಿಕ ವೈದ್ಯ ಪದ್ಥತಿಯನ್ನು ಸಂಶೋಧನೆ ಮಾಡಿರುವುದನ್ನು ಆಧುನಿಕ ಜಗತ್ತಿಗೆ ಮತ್ತೊಮ್ಮೆ ತಿಳಿಸುವ ಪ್ರಯತ್ನ ಅಗಿದೆ ಎಂದು ಶ್ಲಾಘಿಸಿದರು.

ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಾಚೀನ ವೈದ್ಯ ಪದ್ದತಿಯ ಪಾತ್ರ ದೊಡ್ಡದು. ಇದರ ಬಗ್ಗೆ ಜಾಗೃತಿ ಅಗತ್ಯ ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ನಗರದ ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯುಷ್ ಹಬ್ಬ ಸಮಿತಿ 2026 ವತಿಯಿಂದ ಆಯೋಜಿಸಲಾದ ಎರಡು ದಿನಗಳ ಆಯುಷ್ ಹಬ್ಬ 2026ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಪ್ರಾಚೀನ ವೈದ್ಯ ಪದ್ದತಿಗಳು ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕೂಡ ನೀಡುತ್ತವೆ. ಇದು ಋಷಿ ಮುನಿಗಳು ಜಗತ್ತಿನ ಆರೋಗ್ಯ, ಕಲ್ಯಾಣಕ್ಕಾಗಿ ತೋರಿಸಿದ ಉತ್ತಮ ದಾರಿ ಎಂದು ನುಡಿದರು.

ದೇಶದ ಶ್ರೀಮಂತವಾದ ವೈದ್ಯ ಪರಂಪರೆ ಉಳಿಸಬೇಕು. ಅಂತೆಯೇ ಮುಂದಿನ ಜನಾಂಗಕ್ಕಾಗಿ ನಮ್ಮ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಕೂಡ ನಮ್ಮೆಲ್ಲರ ಮೇಲಿದೆ ಎಂದು ಸ್ವಾಮೀಜಿ ಹೇಳಿದರು.

ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ್ಹ ಅವರು ಮಾತನಾಡಿ, ಅಲೋಪತಿ ಹಲವು ಕಾಯಿಲೆಗಳಿಗೆ ಲಸಿಕೆ, ಔಷಧಿ ನೀಡಿದೆ. ಆದರೆ ಇಂದು ಆಯುರ್ವೇದ, ಯುನಾನಿ ಮೊದಲಾದವುಗಳನ್ನು ಒಳಗೊಂಡ ಪಾರಂಪರಿಕವಾದ ಸಮಗ್ರ ವೈದ್ಯಪದ್ದತಿ ಕೂಡ ಜಾಗತಿಕವಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ ಶೇ 40- ಶೇ.90 ರಷ್ಟು ಮಂದಿ ಬೇರೆ ಬೇರೆ ರೀತಿಯ ಸಾಂಪ್ರದಾಯಿಕ ವೈದ್ಯಕೀಯ ಪದ್ದತಿಯನ್ನು ಅನುಸರಿಸುತ್ತಿದ್ದಾರೆ ಇದರ ಮಾರುಕಟ್ಟೆ ಕೂಡ ವಿಸ್ತರಣೆಯಾಗುತ್ತಿದೆ. ಆಲೋಪತಿಯಲ್ಲಿ ಗುಣವಾಗದ ಕೆಲವು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರ ದೊರೆಯುತ್ತಿದೆ. ಮಾನಸಿಕ, ದೈಹಿಕ ಆರೋಗ್ಯ, ನೆಮ್ಮದಿಗೆ ಆಯುಷ್ ಕಾರಣವಾಗಿದೆ ಎಂದು ಹೇಳಿದರು.

ಪರಂಪರೆಯ ಆಹಾರ ಪದ್ದತಿ ಕಡೆಗೆ ಗಮನ ಹರಿಸಬೇಕಾಗಿದೆ: ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷ ಮೌಲಾನಾ ಅಬ್ದುಲ್‌ಅಝೀಝ್ ದಾರಿಮಿ ಅವರು ಮಾತನಾಡಿ, ಪ್ರಕೃತಿಯೊಂದಿಗೆ ಸೇರಿ ಬದುಕುವುದನ್ನು ನಮ್ಮ ಪಾರಂಪರಿಕ ಚಿಕಿತ್ಸಾ ಪದ್ದತಿ ಕಲಿಸಿಕೊಟ್ಟಿದೆ. ಮತ್ತೆ ಪರಂಪರೆಯ ಆಹಾರ ಪದ್ದತಿ, ವೈದ್ಯಕೀಯ ಪದ್ದತಿಯ ಕಡೆಗೆ ಹೆಚ್ಚು ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಮಾಹೆ ವಿವಿಯ ಪ್ರೊ ಚಾನ್ಸಲರ್ ಪ್ರೊ. ಎಚ್.ಎಸ್. ಬಳ್ಳಾಲ್ ಅವರು ಮಾತನಾಡಿ, ಇಂದು ಆಯುರ್ವೇದದ ಮೇಲಿನ ನಂಬಿಕೆ ಹೆಚ್ಚುತ್ತಿದೆ. ಮಾಹೆ ಆಯುರ್ವೇದಕ್ಕೂ ಆದ್ಯತೆ ನೀಡುತ್ತಿದೆ. ಹಲವು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರವಿದೆ. ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಆಯುರ್ವೇದ ಸಹಾಯ ಮಾಡುತ್ತದೆ. ಆಯುರ್ವೇದದ ಬಗ್ಗೆ ಯುವ ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಭಾರತದ ಪ್ರಾಚೀನ ವೈದ್ಯ ಪದ್ದತಿ ಶ್ರೀಮಂತವಾಗಿತ್ತು. ಇಂದಿಗೂ ಅದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಇದು ಋಷಿ ಮುನಿಗಳಿಂದ ಜಗತ್ತಿಗೆ ಲಭಿಸಿದ ವೈದ್ಯ ಪದ್ದತಿ. ದೈಹಿಕ ಕಾಯಿಲೆಗಳಿಗೆ ಔಷಧಿಯಾಗುವ ಜತೆಗೆ ಒತ್ತಡ ನಿವಾರಣೆ ಯಂತಹ ಮಾನಸಿಕ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ. ಆಯುರ್ವೇದ ಸಹಿತ ಪಾರಂಪರಿಕ ವೈದ್ಯ ಪದ್ದತಿಯನ್ನು ಬೆಳೆಸುವುದಕ್ಕಾಗಿ ಕೇಂದ್ರ ಸರಕಾರ ಪ್ರತ್ಯೇಕ ಆಯುಷ್ ಸಚಿವಾಲಯ ರಚನೆ ಮಾಡಿದೆ ಎಂದು ಹೇಳಿದರು.

‘ಆಯುಷ್ ಹಬ್ಬ ಸಮಿತಿ- 2026‘ರ ಅಧ್ಯಕ್ಷ ಡಾ. ಕೇಶವ ಪಿ.ಕೆ ಅಧ್ಯಕ್ಷತೆ ವಹಿಸಿದ್ದರು.

ದ.ಕ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಬೆಂಗಳೂರು ಎಸ್.ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್, ಎಸ್ ಡಿ ಎಂ ಆಯುರ್ವೇದ ಮೆಡಿಕಲ್ ಕಾಲೇಜುಗಳ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್, ಡಾ.ಖಾಲಿದ್, ಕೋಟೆಕಲ್ ವೈದ್ಯಕೀಯ ಸಂಸ್ಥೆಯ ಡಾ. ಮಧು ವಾರಿಯರ್, ಆಯುರ್ವೇದ ಯುನಾನಿ ವೈದ್ಯ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಸತ್ಯಮೂರ್ತಿ ಭಟ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ ಉಪಸ್ಥಿತರಿದ್ದರು.

ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಸ್ವಾಗತಿಸಿ ವಂದಿಸಿದರು.

ಆರೋಗ್ಯಕರ ಆಹಾರ ಹಬ್ಬ, ಮಹಿಳಾ ಸ್ವಾಸ್ಥ್ಯ ಹಬ್ಬ, ಆಯುಷ್ ಸೌಂದರ್ಯ ಹಬ್ಬ, ಹೃದಯ ಆರೋಗ್ಯ ಸಂಭ್ರಮ, ನಾಡಿ ತರಂಗಿಣಿ, ಒತ್ತಡ ನಿರ್ವಹಣಾ ಕೌಶಲ್ಯ, ಸಂತೃಪ್ತ ಜೀವನ ಸಂಧ್ಯಾ, ಸ್ವದೇಶಿ ಸಾವಯವ ಹಬ್ಬ, ಸ್ವಾಸ್ಥ್ಯ ಪ್ರದರ್ಶನ ಮತ್ತು ಔಷಧ ಮಳಿಗೆಗಳು, ವೈದ್ಯಕೀಯ ಅಧೀವೇಶನದ ಹಾಕಥಾನ್, ಸಾಂಸ್ಕೃತಿಕ ವೈಭವ, ಮನರಂಜನಾ ಹಬ್ಬ, ಮಕ್ಕಳ ಹಬ್ಬ, ಆಯುಷ್ ಚಿಕಿತ್ಸಾ ದರ್ಶನ ಔಷಧಿ ಸಸ್ಯ ಪ್ರದರ್ಶನ, ಹಣ್ಣು ಹಂಪಲು, ತರಕಾರಿಗಳ ಆಯುಷ್ ಹಬ್ಬದಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News